
IPL 2026: ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಸಂಜು ಸ್ಯಾಮ್ಸನ್ (Sanju Samson), ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 8 ರನ್‌ಗಳಿಂದ ವಿರಾಟ್ ಕೊಹ್ಲಿಯ (Virat Kohli) ಪ್ರಮುಖ ದಾಖಲೆಯೊಂದನ್ನು ಮುರಿಯುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಸಿಎಸ್ಕೆ ಪರ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಸಂಜು ಸ್ಯಾಮ್ಸನ್ ಪವರ್ಪ್ಲೇ ಮುಗಿಯುತ್ತಿದ್ದಂತೆ ಅಬ್ಬರಿಸಿದರು. ಈ ಮೂಲಕ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಸಿಡಿಲಬ್ಬರ ಶುರು ಮಾಡಿದ ಸ್ಯಾಮ್ಸನ್ ಅಂತಿಮ 52 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 87 ರನ್ ಬಾರಿಸಿದರು.

ಈ 87 ರನ್ಗಳೊಂದಿಗೆ ಐಪಿಎಲ್ ಸೀಸನ್ವೊಂದರಲ್ಲಿ ಒಂದೇ ತಂಡದ ವಿರುದ್ಧ 2 ಪಂದ್ಯಗಳ ಮೂಲಕ 200+ ರನ್ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಮಾತ್ರ ಈ ಸಾಧನೆ ಮಾಡಿದ್ದರು.

2016ರ ಐಪಿಎಲ್ ಸೀಸನ್ನಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಜೇಯ 100 ರನ್ ಹಾಗೂ ಮತ್ತೊಂದು ಪಂದ್ಯದಲ್ಲಿ 109 ರನ್ ಸಿಡಿಸಿದ್ದರು. ಈ ಮೂಲಕ ಒಂದೇ ತಂಡದ ವಿರುದ್ಧ ಲೀಗ್ ಹಂತದ 2 ಪಂದ್ಯಗಳಲ್ಲಿ ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದರು.

ಈ ದಾಖಲೆಯನ್ನು 2022 ರಲ್ಲಿ ಕೆಎಲ್ ರಾಹುಲ್ ಸರಿಗಟ್ಟಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಕೆಎಲ್ ರಾಹುಲ್ 103 ರನ್ಗಳ ಎರಡು ಅಜೇಯ ಶತಕ ಸಿಡಿಸಿ, ಲೀಗ್ ಹಂತದಲ್ಲಿ ಒಂದೇ ತಂಡದ ವಿರುದ್ಧ 2 ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದ್ದರು.

ಈ ದಾಖಲೆಯನ್ನು ಸರಿಗಟ್ಟುವ ಅವಕಾಶ ಸಂಜು ಸ್ಯಾಮ್ಸನ್ ಮುಂದಿತ್ತು. ಈ ಬಾರಿಯ ಐಪಿಎಲ್ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಜೇಯ 115 ರನ್ ಬಾರಿಸಿದ್ದರು. ಇದೀಗ 2ನೇ ಪಂದ್ಯದಲ್ಲಿ ಅಜೇಯ 87 ರನ್ ಸಿಡಿಸಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಶತಕ ಪೂರೈಸಿದ್ದರೆ ಈ ಸಾಧನೆ ಮಾಡಿದ 3ನೇ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು.

ಅಷ್ಟೇ ಅಲ್ಲದೆ ಈ ಎರಡು ಪಂದ್ಯಗಳ ಮೂಲಕ ಸಂಜು ಸ್ಯಾಮ್ಸನ್ ಕಲೆಹಾಕಿದ ಒಟ್ಟು ಸ್ಕೋರ್ 202 ರನ್ಗಳು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಂಜು ಹೆಚ್ಚುವರಿ 8 ರನ್ ಕಲೆಹಾಕಿದ್ದರೆ ವಿರಾಟ್ ಕೊಹ್ಲಿ ಭರ್ಜರಿ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದಿತ್ತು.

ಅಂದರೆ ವಿರಾಟ್ ಕೊಹ್ಲಿ 2016 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲೀಗ್ ಹಂತದಲ್ಲಿ 2 ಪಂದ್ಯಗಳ ಮೂಲಕ ಒಟ್ಟು 209 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಮುರಿಯುವ ಉತ್ತಮ ಅವಕಾಶ ಸಂಜು ಸ್ಯಾಮ್ಸನ್ ಮುಂದಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 115 ರನ್ ಬಾರಿಸಿದ್ದ ಸಂಜು, ಈ ಬಾರಿ 87 ರನ್ ಮಾತ್ರ ಗಳಿಸಿದ್ದಾರೆ. ಈ ಮೂಲಕ 2 ಪಂದ್ಯಗಳಿಂದ ಒಟ್ಟು 202 ರನ್ ಕಲೆಹಾಕಿದ್ದಾರೆ. ಒಂದು ವೇಳೆ ದ್ವಿತೀಯ ಪಂದ್ಯದಲ್ಲಿ 95 ರನ್ಗಳಿಸಿದ್ದರೆ, ವಿರಾಟ್ ಕೊಹ್ಲಿ (209) ಭರ್ಜರಿ ದಾಖಲೆಯನ್ನು ಮುರಿಯಬಹುದಿತ್ತು. ಆದರೆ ಕೇವಲ 8 ರನ್‌ಗಳಿಂದ ಐಪಿಎಲ್ ವಿಶೇಷ ದಾಖಲೆಯಿಂದ ಸಂಜು ಸ್ಯಾಮ್ಸನ್ ವಂಚಿತರಾಗಿದ್ದಾರೆ.
Published On - 7:03 am, Wed, 6 May 26