
ಜಿಂಬಾಬ್ವೆ ವಿರುದ್ಧದ ಎರಡನೇ ಮಹಿಳಾ ಟಿ20 ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಧಿಕೃತ ಎಚ್ಚರಿಕೆ ನೀಡಲಾಗಿದ್ದು, ಒಂದು ಡಿಮೆರಿಟ್ ಪಾಯಿಂಟ್ ಕೂಡ ವಿಧಿಸಲಾಗಿದೆ. ಅಕ್ಟೋಬರ್ 18ರ ಭಾನುವಾರ ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕ್ಯಾಚ್ ಕೈಬಿಟ್ಟ ಬೇಸರದಲ್ಲಿ ಶಫಾಲಿ ಚೆಂಡನ್ನು ನೆಲಕ್ಕೆ ಎಸೆದಿದ್ದರು. ಇದೇ ಕಾರಣಕ್ಕೆ ಐಸಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ(PC-PTI).
ಜಿಂಬಾಬ್ವೆ ತಂಡದ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಭಾರತದ ಬೌಲರ್ ಶ್ರೀ ಚರಣಿ ಬೌಲಿಂಗ್‌ನಲ್ಲಿ ಚಿಪೊ ಮುಗೇರಿ-ತಿರಿಪಾನೊ ನೀಡಿದ ಕ್ಯಾಚ್ ಅನ್ನು ಮಿಡ್‌ಆಫ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶಫಾಲಿ ವರ್ಮಾ ಕೈಚೆಲ್ಲಿದ್ದರು. ಕ್ಯಾಚ್ ಕೈತಪ್ಪಿದ ಸಿಟ್ಟಿನಲ್ಲಿ ಶಫಾಲಿ ಚೆಂಡನ್ನು ನೆಲಕ್ಕೆ ಎಸೆದಿದ್ದರು(PC-PTI).
ಶಫಾಲಿ ಅವರ ಈ ವರ್ತನೆಯನ್ನು ಐಸಿಸಿ ನೀತಿ ಸಂಹಿತೆಯ ಮೊದಲ ಹಂತದ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ಕ್ರಿಕೆಟ್ ಉಪಕರಣಗಳು, ಆಟಗಾರರ ಉಡುಪು ಅಥವಾ ಮೈದಾನದ ಉಪಕರಣಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಐಸಿಸಿ ನಿಯಮದ ಆರ್ಟಿಕಲ್ 2.2ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ(PC-PTI).
ತಮ್ಮ ತಪ್ಪನ್ನು ಶಫಾಲಿ ಒಪ್ಪಿಕೊಂಡಿದ್ದಾರೆ. ಎಮಿರೇಟ್ಸ್ ಐಸಿಸಿ ಅಂತಾರಾಷ್ಟ್ರೀಯ ಪಂದ್ಯಗಳ ರೆಫರಿಗಳ ಸಮಿತಿಯ ಜಿ.ಎಸ್. ಲಕ್ಷ್ಮಿ ಸೂಚಿಸಿದ ಶಿಕ್ಷೆಯನ್ನೂ ಅವರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರತ್ಯೇಕ ವಿಚಾರಣೆ ನಡೆಸುವ ಅಗತ್ಯ ಬೀಳಲಿಲ್ಲ. ಕಳೆದ 24 ತಿಂಗಳ ಅವಧಿಯಲ್ಲಿ ಶಫಾಲಿ ವಿರುದ್ಧ ದಾಖಲಾಗಿರುವ ಮೊದಲ ಶಿಸ್ತು ಉಲ್ಲಂಘನೆ ಇದಾಗಿದೆ(PC-PTI).
ಐಸಿಸಿ ನಿಯಮಗಳ ಪ್ರಕಾರ, ಮೊದಲ ಹಂತದ ಉಲ್ಲಂಘನೆಗೆ ಅಧಿಕೃತ ಎಚ್ಚರಿಕೆ ನೀಡಬಹುದು. ಇದರ ಜೊತೆಗೆ ಆಟಗಾರರ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸುವ ಅವಕಾಶವೂ ಇದೆ. ಅಲ್ಲದೆ, ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಬಹುದು. 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್ ಪಡೆದರೆ ಅವರನ್ನು ಪಂದ್ಯದಿಂದ ಅಮಾನತುಗೊಳಿಸಲಾಗುತ್ತದೆ(PC-PTI).