ಪಾಕಿಸ್ತಾನ್ ತಂಡದ ಸ್ಟಾರ್ ಬೌಲರ್ ಶಾಹೀನ್ ಶಾ ಅಫ್ರಿದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 4 ರಂದು ಶಾಹೀನ್ ಪಾಕ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಶಾ ಅಫ್ರಿದಿ ಅವರನ್ನು ವಿವಾಹವಾದರು.
ಕರಾಚಿಯಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಂ, ಶಾದಾಬ್ ಖಾನ್, ಫಖರ್ ಜಮಾನ್ ಮತ್ತು ಸರ್ಫರಾಜ್ ಅಹ್ಮದ್ ಪಾಲ್ಗೊಂಡಿದ್ದರು.
ಕಳೆದ ವರ್ಷ ನಡೆದ ಸರಳ ಸಮಾರಂಭದಲ್ಲಿ ಶಾಹೀನ್ ಅನ್ಶಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಅದ್ಧೂರಿ ಕಾರ್ಯಕ್ರಮದ ಮೂಲಕ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಗಳು ಎಂಬುದು ನಮ್ಮ ಉದ್ಯಾನದ ಸುಂದರವಾದ ಹೂವು. ಏಕೆಂದರೆ ಅವು ಅರಳುವುದು ದೊಡ್ಡ ಆಶೀರ್ವಾದದಿಂದ. ಮಗಳು ಎಂಬುದು ನಮ್ಮ ಜೀವನದ ನಗು, ಕನಸು..ಹೃದಯಂತರಾಳದಿಂದ ನಾವು ಪ್ರೀತಿಸುವ ವ್ಯಕ್ತಿ. ಪೋಷಕರಾಗಿ, ನಾನು ನನ್ನ ಮಗಳನ್ನು ನಿಕ್ಕಾಹ್ನಲ್ಲಿ ಶಾಹೀನ್ ಅಫ್ರಿದಿ ಅವರಿಗೆ ನೀಡಿದ್ದೇನೆ. ಅವರಿಬ್ಬರಿಗೆ ಅಭಿನಂದನೆಗಳು ಎಂದು ಶಾಹಿದ್ ಅಫ್ರಿದಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪಾಕಿಸ್ತಾನ್ ಪರ 25 ಟೆಸ್ಟ್, 32 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನಾಡಿರುವ ಶಾಹೀನ್ ಅಫ್ರಿದಿ ಒಟ್ಟು 219 ವಿಕೆಟ್ ಪಡೆದಿದ್ದಾರೆ.
ಇದೀಗ ದಾಂಪತ್ಯ ಜೀವನದ ಮೂಲಕ ಹೊಸ ಇನಿಂಗ್ಸ್ ಆರಂಭಿಸಿರುವ ಎಡಗೈ ವೇಗಿ ಪಾಕಿಸ್ತಾನ್ ಸೂಪರ್ ಲೀಗ್ ಮೂಲಕ ಮತ್ತೆ ಮೈದಾನಕ್ಕೆ ಮರಳಲಿದ್ದಾರೆ.