- Kannada News Photo gallery Cricket photos Shakib al hasan given bowling ban in international cricket kannada news zp
ಬಾಂಗ್ಲಾದೇಶ್ ಆಲ್ರೌಂಡರ್ ಶಕೀಬ್ ಅಲ್ ಹಸನ್ಗೆ ಬೌಲಿಂಗ್ ಬ್ಯಾನ್..!
Shakib Al Hasan: ಬಾಂಗ್ಲಾದೇಶ್ ಪರ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಶಕೀಬ್ ಅಲ್ ಹಸನ್ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 246 ವಿಕೆಟ್ ಪಡೆದಿರುವ ಶಕೀಬ್, ಟಿ20 ಕ್ರಿಕೆಟ್ನಲ್ಲಿ 149 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ 317 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Updated on: Dec 16, 2024 | 8:54 AM

ಬಾಂಗ್ಲಾದೇಶ್ ತಂಡದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ನಿಷೇಧಿಸಲಾಗಿದೆ. ಅವರ ಬೌಲಿಂಗ್ ಶೈಲಿಯಲ್ಲಿ ಲೋಪಗಳು ಕಂಡು ಬಂದಿದ್ದರಿಂದ ನಿಷೇಧ ಹೇರಲಾಗಿದ್ದು, ಹೀಗಾಗಿ ಇನ್ಮುಂದೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶಕೀಬ್ ಬೌಲಿಂಗ್ ಮಾಡುವಂತಿಲ್ಲ.

ಕೆಲ ತಿಂಗಳ ಹಿಂದೆಯಷ್ಟೇ ಶಕೀಬ್ ಅಲ್ ಹಸನ್ ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಪಂದ್ಯವಾಡಿದ್ದರು. ಈ ವೇಳೆ ಅವರ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಇದನ್ನು ಪರಿಶೀಲಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಶಕೀಬ್ ಅವರಿಗೆ ಬೌಲಿಂಗ್ ಬ್ಯಾನ್ ಹೇರಿತ್ತು.

ಇದರ ಬೆನ್ನಲ್ಲೇ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ ಕೂಡ ಶಕೀಬ್ ಅಲ್ ಹಸನ್ ಅವರ ಬೌಲಿಂಗ್ ಶೈಲಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಇದೇ ವೇಳೆ ಶಕೀಬ್ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿರುವುದು ಕಂಡುಬಂದಿದೆ. ಐಸಿಸಿ ನಿಯಮಾವಳಿಗಳ ಪ್ರಕಾರ, ಯಾವುದೇ ಬೌಲರ್‌ನ ಮೊಣಕೈ ಮಿತಿಯನ್ನು ಮೀರಿ ವಿಸ್ತರಿಸಿದರೆ ಕಾನೂನುಬಾಹಿರ ಬೌಲಿಂಗ್ ಎಂದು ಪರಿಗಣಿಸಲಾಗುತ್ತದೆ.

ಅದರಂತೆ ಶಕೀಬ್ ಅಲ್ ಹಸನ್ ಅವರ ಬೌಲಿಂಗ್ ಶೈಲಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸ್ಥಾಪಿತ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಖಚಿತವಾಗಿದೆ. ಹೀಗಾಗಿ ಇನ್ಮುಂದೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡಬಾರದೆಂದು ನಿಷೇಧ ಹೇರಲಾಗಿದೆ.

ಬಾಂಗ್ಲಾದೇಶ್ ಪರ 447 ಪಂದ್ಯಗಳನ್ನಾಡಿರುವ ಶಕೀಬ್ ಅಲ್ ಹಸನ್ 488 ಇನಿಂಗ್ಸ್ಗಳಲ್ಲಿ 5165.5 ಓವರ್ಗಳನ್ನು ಎಸೆದಿದ್ದಾರೆ. ಈ ವೇಳೆ ಒಟ್ಟು 712 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬಾಂಗ್ಲಾ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಬರೆದಿರುವ ಶಕೀಬ್ ಅಲ್ ಹಸನ್ ನಿವೃತ್ತಿಯ ಅಂಚಿನಲ್ಲಿ ಬೌಲಿಂಗ್ ಬ್ಯಾನ್ಗೆ ಒಳಗಾಗಿದ್ದಾರೆ.



















