- Kannada News Photo gallery Cricket photos Smriti mandhana in post match presentation after RCB vs UPW WPL 2023 match she said I Take The Blame
Smriti Mandhana: ಸತತ ನಾಲ್ಕನೇ ಸೋಲು: ಪಂದ್ಯದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ
RCB vs UPW, WPL 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ ಆರ್‌ಸಿಬಿ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತಾದರೂ ನಂತರದಲ್ಲಿ ದಿಢೀರ್ ಕುಸಿತ ಕಂಡಿತು. ಯುಪಿ ವಾರಿಯರ್ಸ್ ವಿರುದ್ಧ ಬೌಲರ್ಗಳಂತು ಅದೇ ಕಳಪೆ ಆಟ ಮುಂದುವರೆಸಿದರು.
Updated on: Mar 11, 2023 | 9:24 AM

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಇದುವರೆಗೆ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿರುವ ಆರ್‌ಸಿಬಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಶುಕ್ರವಾರ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲೂ ಬೆಂಗಳೂರು ಗೆಲ್ಲುವಲ್ಲಿ ಎಡವಿತು.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತಾದರೂ ನಂತರದಲ್ಲಿ ದಿಢೀರ್ ಕುಸಿತ ಕಂಡಿತು. ಬೌಲರ್ಗಳಂತು ಅದೇ ಕಳಪೆ ಆಟ ಮುಂದುವರೆಸಿದರು. ಈ ಬಾರಿ ಕೂಡ ಎದುರಾಳಿಯ ಒಂದೂ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತಂಡದ ಸೋಲಿಗೆ ನಾನೇ ಕಾರಣ ಎಂದಿರುವ ಮಂಧಾನ ಇದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದಾರೆ.

ಕಳೆದ ನಾಲ್ಕು ಪಂದ್ಯಗಳಲ್ಲಿ ನಮ್ಮ ತಂಡದಿಂದ ಇದೇ ಪ್ರದರ್ಶನ ಬರುತ್ತಿದೆ. ನಾವು ಉತ್ತಮ ಆರಂಭ ಪಡೆದುಕೊಳ್ಳುತ್ತೇವೆ. ಆದರೆ, ನಂತರ ದಿಢೀರ್ ವಿಕೆಟ್ಗಳು ಪತನಗೊಳುತ್ತವೆ. ಈ ಸೋಲಿನ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆ. ನಮ್ಮ ಬೌಲರ್ಗಳು ಏನಾದರು ಮಾಡಬೇಕು ಎಂದರೆ ನಾವು ಮೊದಲಿಗೆ ರನ್ ಗಳಿಸಬೇಕು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ಕೆಲ ಯೋಜನೆ ಹಾಕಿಕೊಂಡಿದ್ದೆವು. 7 ರಿಂದ 15 ಓವರ್ ವರೆಗೆ ಪ್ರತಿ ಓವರ್ನಲ್ಲಿ 7 ರಿಂದ 8 ರನ್ ಹೊಡೆಯುವ ಬಗ್ಗೆ ಚರ್ಚೆಸಿದ್ದೆವು. ಆದರೆ, ಈ ಪ್ಲಾನ್ ವರ್ಕ್ ಆಗಲಿಲ್ಲ. ಇದು ಯಾವರೀತಿ ಸಾಗುತ್ತದೆ ಎಂಬುದನ್ನು ನೋಡಬೇಕಿದೆ. ತಂಡದ ಎಲ್ಲ ಆಟಗಾರ್ತಿಯರ ಜೊತೆ ಈ ಬಗ್ಗೆ ನಾನು ಮಾತನಾಡುತ್ತೇನೆ. - ಸ್ಮೃತಿ ಮಂಧಾನ.

ಕಳೆದ ಒಂದು ವಾರ ನಮ್ಮ ತಂಡಕ್ಕೆ ತುಂಬಾ ಕಠಿಣವಾಗಿತ್ತು. ಕೆಲಸ ಮಾಡಲು ಸಾಕಷ್ಟಿದೆ. ಕಳೆದ ವಾರ ನಿಜವಾಗಿಯೂ ಕಠಿಣವಾಗಿದೆ ಎಂದು ಒಪ್ಪಿಕೊಳ್ಳಬೇಕು. ಸಾಕಷ್ಟು ಜನ ನನ್ನ ಬಳಿ ಮಾತನಾಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟಿಗರಾದ ನಾವು ಈ ರೀತಿಯ ಸಂದರ್ಭವನ್ನು ಎದುರಿಸಿದ್ದೇವೆ. ಮುಂದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುತ್ತೇವೆ ಎಂಬುದು ಮಂಧಾನ ಮಾತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಆರಂಭದಲ್ಲೇ ನಾಯಕಿ ಸ್ಮೃತಿ ಮಂಧಾನಾ (4) ವಿಕೆಟ್ ಕಳೆದುಕೊಂಡಿತು. ಸೋಫಿ ಡಿವೈನ್ 24 ಎಸೆತಗಳಲ್ಲಿ 36 ರನ್ ಸಿಡಿಸಿ ಕೊಂಚ ಚೇತರಿಕೆ ತಂದುಕೊಟ್ಟರು. ಅವರೊಟ್ಟಿಗೆ ಸ್ಟಾರ್ ಆಲ್‌ರೌಂಡರ್ ಎಲೀಸ್ ಪೆರಿ ಉತ್ತಮ ಜೊತೆಯಾಟ ಕಟ್ಟಿದರು.

ಹೆದರ್ ನೈಟ್ (8) ರನ್‌ಔಟ್ ಆಗಿದ್ದು ಆರ್‌ಸಿಬಿಗೆ ನುಂಗಲಾರದ ತುತ್ತಾಯಿತು. 39 ಎಸೆತಗಳಲ್ಲಿ 6 ಫೋರ್ ಮತ್ತು 1 ಸಿಕ್ಸರ್‌ನೊಂದಿಗೆ 52 ರನ್ ಸಿಡಿದ್ದ ಎಲೀಸ್ ಪೆರಿ ಅಂತಿಮ ಹಂತದ ವರೆಗೆ ನಿಲ್ಲಲಿಲ್ಲ. ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. ಆರ್‌ಸಿಬಿ 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲ್‌ಔಟ್ ಆಯಿತು.

ಯುಪಿ ಪರ ಸೋಫಿ ಎಕ್ಲೇಸ್ಟೋನ್ 3.3 ಓವರ್‌ಗಳಲ್ಲಿ ಕೇವಲ 13 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ದೀಪ್ತಿ ಶರ್ಮಾ 3 ರಾಜೇಶ್ವರಿ ಗಾಯಕ್ವಾಡ್ ಒಂದು ವಿಕೆಟ್ ಕಿತ್ತರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ವಾರಿಯರ್ಸ್ ಶರವೇಗದಲ್ಲಿ ಗುರಿ ತಲುಪಿತು. ದೇವಿಕಾ ವೈದ್ಯ (ಅಜೇಯ 36) ಮತ್ತು ಅಲಿಸಾ ಹೀಲಿ (ಅಜೇಯ 96) ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ 13 ಓವರ್‌ಗಳಲ್ಲೇ ಗೆಲುವು ಸಾಧಿಸುವಂತೆ ಮಾಡಿದರು. ಈ ಮೂಲಕ ಯುಪಿ 10 ವಿಕೆಟ್ಗಳ ಅಮೋಘ ಜಯ ಸಾಧಿಸಿತು.
























