
ಕೊಲಂಬೊದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 70 ರನ್ ಪೇರಿಸಿದ ಬಳಿಕ ಪ್ರತಿಕಾ 30 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮೃತಿ ಮಂಧಾನ ಮೈದಾನದ ಮೂಲೆ ಮೂಲೆಗೆ ಫೋರ್ಗಳನ್ನು ಬಾರಿಸಿದರು.

ಈ ಮೂಲಕ ಕೇವಲ 92 ಎಸೆತಗಳಲ್ಲಿ ಶತಕ ಪೂರೈಸಿದರು. ವಿಶೇಷ ಎಂದರೆ ಇದು ಸ್ಮೃತಿ ಮಂಧಾನ ಅವರ 11ನೇ ಏಕದಿನ ಶತಕ. ಈ ಸೆಂಚುರಿಯೊಂದಿಗೆ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ವುಮೆನ್ಸ್ ಕ್ರಿಕೆಟ್ನಲ್ಲಿ 10 ಕ್ಕಿಂತ ಅಧಿಕ ಶತಕ ಸಿಡಿಸಿ ಮೊದಲ ಭಾರತೀಯ ಆಟಗಾರ್ತಿ ಹಾಗೂ ವಿಶ್ವದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್. ಮೆಗ್ 103 ಏಕದಿನ ಪಂದ್ಯಗಳಲ್ಲಿ ಒಟ್ಟು 15 ಶತಕ ಸಿಡಿಸಿದ್ದಾರೆ. ಹಾಗೆಯೇ ನ್ಯೂಝಿಲೆಂಡ್ನ ಸುಝಿ ಬೆಟ್ಸ್ 171 ಏಕದಿನ ಪಂದ್ಯಗಳಿಂದ 13 ಶತಕ ಬಾರಿಸಿದ್ದಾರೆ.

ಇದೀಗ ಸ್ಮೃತಿ ಮಂಧಾನ 102 ಏಕದಿನ ಪಂದ್ಯಗಳ ಮೂಲಕ ಒಟ್ಟು 11 ಶತಕ ಬಾರಿಸಿದ್ದಾರೆ. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಹತ್ತಕ್ಕಿಂತ ಅಧಿಕ ಸೆಂಚುರಿ ಸಿಡಿಸಿದ ವಿಶ್ವದ 3ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ.