IPL 2025: ಮುಂದಿನ ಪಂದ್ಯಕ್ಕೆ RCB ನಾಯಕನೇ ಅಲಭ್ಯ..!
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಸಂಜೆ ಭಾರತ ಮತ್ತು ಪಾಕಿಸ್ತಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಈ ಬೆಳವಣಿಗೆ ನಡೆದಿದ್ದು, ಹೀಗಾಗಿ ಈ ವಾರದಲ್ಲೇ ಐಪಿಎಲ್ ಮತ್ತೆ ಶುರುವಾಗಲಿದೆ.
Updated on: May 11, 2025 | 7:54 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 59ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಲಿದೆ. ಲಕ್ನೋ ಏಕಾನ ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಈ ಪಂದ್ಯದಲ್ಲಿ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ರಜತ್ ಪಾಟಿದಾರ್ ಅವರ ಬೆರಳಿಗೆ ಗಾಯವಾಗಿದ್ದು, ಹೀಗಾಗಿ ವೈದ್ಯರು ಕೆಲ ದಿನಗಳವರೆಗೆ ವಿಶ್ರಾಂತಿ ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು.

ಇದೀಗ ಒಂದು ವಾರದ ಬಳಿಕ ಐಪಿಎಲ್ ಅನ್ನು ಪುನರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಗುರುವಾರ ಅಥವಾ ಶುಕ್ರವಾರದಿಂದ ಟೂರ್ನಿ ಮತ್ತೆ ಶುರುವಾಗುವ ಸಾಧ್ಯತೆಯಿದೆ. ಈ ವೇಳೆಗೆ ರಜತ್ ಪಾಟಿದಾರ್ ಅವರ ಗಾಯವು ಸಂಪೂರ್ಣ ಗುಣವಾದರೆ ಮಾತ್ರ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಇತ್ತ ರಜತ್ ಪಾಟಿದಾರ್ ಅಲಭ್ಯರಾಗುವ ಸಾಧ್ಯತೆಯಿರುವ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈಗಾಗಲೇ ಹಂಗಾಮಿ ನಾಯಕನಾಗಿ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಒಂದು ವೇಳೆ ಪಾಟಿದಾರ್ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯದಿದ್ದರೆ, ಜಿತೇಶ್ ಶರ್ಮಾ ಆರ್ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.

ಇನ್ನು ಆರ್ಸಿಬಿ ತಂಡದ ಮುಂದಿನ ಎದುರಾಳಿಗಳು ಯಾರೆಂದು ನೋಡುವುದಾದರೆ... ಲಕ್ನೋ ಸೂಪರ್ ಜೈಂಟ್ಸ್ (ಏಕಾನ ಸ್ಟೇಡಿಯಂ ಲಕ್ನೋ), ಸನ್ರೈಸರ್ಸ್ ಹೈದರಾಬಾದ್ (ಚಿನ್ನಸ್ವಾಮಿ ಸ್ಡೇಡಿಯಂ ಬೆಂಗಳೂರು) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (ಚಿನ್ನಸ್ವಾಮಿ ಸ್ಡೇಡಿಯಂ ಬೆಂಗಳೂರು). ಈ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಆರ್ಸಿಬಿ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದೆ.
