Updated on: Jan 21, 2023 | 9:56 PM
ಬಿಗ್ ಬ್ಯಾಷ್ ಲೀಗ್ನಲ್ಲಿ ಸ್ಟೀವ್ ಸ್ಮಿತ್ ಅವರ ಅಬ್ಬರ ಮುಂದುವರೆದಿದೆ. ಈ ಮೊದಲು ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಸ್ಮಿತ್ ಇದೀಗ ಸಿಡ್ನಿ ಥಂಡರ್ ವಿರುದ್ಧ ಮತ್ತೊಂದು ಸೆಂಚುರಿ ಬಾರಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಡ್ನಿ ಸಿಕ್ಸರ್ಸ್ ತಂಡದ ನಾಯಕ ಮೊಯ್ಸೆಸ್ ಹೆನ್ರಿಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಸ್ಟೀವ್ ಸ್ಮಿತ್ ಹಾಗೂ ಜೋಶ್ ಫಿಲಿಪೆ ಇನಿಂಗ್ಸ್ ಆರಂಭಿಸಿದ್ದರು. ಆದರೆ ಕೇವಲ 10 ರನ್ಗಳಿಸಿ ಫಿಲಿಪೆ ಔಟಾದರು.
ಆದರೆ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮಿತ್ ಥಂಡರ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಸ್ಟೀವ್ ಬ್ಯಾಟ್ನಿಂದ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 66 ಎಸೆತಗಳಲ್ಲಿ ಅಜೇಯ 125 ರನ್ ಬಾರಿಸಿದರು.
ಸ್ಟೀವ್ ಸ್ಮಿತ್ ಅವರ ಈ ಸಿಡಿಲಬ್ಬರದ ಶತಕದ ನೆರವಿನಿಂದ ಸಿಡ್ನಿ ಸಿಕ್ಸರ್ಸ್ ತಂಡವು ನಿಗದಿತ 19 ಓವರ್ಗಳಲ್ಲಿ (ಮಳೆಯ ಕಾರಣ) 2 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಸಿಡ್ನಿ ಥಂಡರ್ ತಂಡವು ಕೇವಲ 62 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಸಿಡ್ನಿ ಸಿಕ್ಸರ್ 125 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇನ್ನು ಸ್ಪೋಟಕ ಸೆಂಚುರಿ ಸಿಡಿಸಿದ ಸ್ಟೀವ್ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬಿಗ್ ಬ್ಯಾಷ್ ಲೀಗ್ನ ಕಳೆದ 11 ಸೀಸನ್ನಲ್ಲಿ ಒಂದೇ ಒಂದು ಶತಕ ಬಾರಿಸದ ಸ್ಮಿತ್ ಇದೀಗ ಸತತವಾಗಿ 2 ಸೆಂಚುರಿ ಸಿಡಿಸುವ ಮೂಲಕ ಅಬ್ಬರಿಸಿರುವುದು ವಿಶೇಷ.