Updated on:Jan 22, 2023 | 7:45 AM
ಸದ್ಯ ಏಕದಿನ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಆಪತ್ಬಾಂಧವ ಎನಿಸಿಕೊಂಡಿರುವ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಕಳೆದ ವರ್ಷದಿಂದಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 1 ವರ್ಷದಿಂದ ಅದೇ ಫಾರ್ಮ್ ಅನ್ನು ಮುಂದುವರೆಸಿರುವ ಅವರು ಈ ವರ್ಷವನ್ನು ಅಬ್ಬರದಿಂದ ಆರಂಭಿಸಿದ್ದಾರೆ. ಈ ಮೂಲಕ ಸಿರಾಜ್ ಪವರ್‌ಪ್ಲೇಯ ರಾಜ ಎನಿಸಿಕೊಂಡಿದ್ದು, ರನ್ ನೀಡುವಲ್ಲಿ ಜಿಪುಣ ಕೂಡ ಆಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಸಿರಾಜ್, ಆರು ಓವರ್‌ಗಳ ಸ್ಪೆಲ್‌ನಲ್ಲಿ, ಕೇವಲ 10 ರನ್‌ಗಳನ್ನು ನೀಡುವ ಮೂಲಕ ಒಂದು ವಿಕೆಟ್ ಪಡೆದರು. ಈ ಸ್ಪೆಲ್‌ನಲ್ಲಿ ಅವರು ಮೊದಲ ಓವರ್ ಮೇಡನ್ ಆಗಿತ್ತು. ಮೊದಲ ಏಕದಿನ ಪಂದ್ಯದಲ್ಲೂ ಸಿರಾಜ್ ಮೇಡನ್ ಓವರ್ ಬೌಲ್ ಮಾಡಿದ್ದರು.
ಈ ಮೂಲಕ 2022 ರಿಂದ ಇಲ್ಲಿಯವರೆಗೆ ಅತಿ ಹೆಚ್ಚು ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ ಬೌಲರ್ ಎಂಬ ದಾಖಲೆಯನ್ನು ಸಿರಾಜ್ ಬರೆದಿದ್ದಾರೆ.
2022 ರಿಂದ ಸಿರಾಜ್ ಒಟ್ಟು 17 ಮೇಡನ್ ಓವರ್‌ಗಳನ್ನು ಎಸೆದಿದ್ದು, ಪ್ರಸ್ತುತ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಂತರ, 14 ಮೇಡನ್ ಓವರ್‌ಗಳನ್ನು ಎಸೆದಿರುವ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ 10 ಮೇಡನ್‌ಗಳನ್ನು ಹಾಕಿರುವ ಟ್ರೆಂಟ್ ಬೌಲ್ಟ್ ಮೂರನೇ ಸ್ಥಾನದಲ್ಲಿದ್ದಾರೆ.
ಸಿರಾಜ್ ಈ ವರ್ಷ ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, ಅದರಲ್ಲಿ 15 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಈ ವರ್ಷ ಭಾರತದ ಅತ್ಯಂತ ಯಶಸ್ವಿ ಬೌಲರ್ ಕೂಡ ಎನಿಸಿಕೊಂಡಿದ್ದಾರೆ.
Published On - 7:45 am, Sun, 22 January 23