Asia Cup: ಟಿ20 ಏಷ್ಯಾಕಪ್‌ನಲ್ಲಿ ಭಾರತದ ಈ ದಾಖಲೆಯನ್ನು ಯಾವ ತಂಡಕ್ಕೂ ಮುರಿಯಲು ಸಾಧ್ಯವಾಗಿಲ್ಲ
Asia Cup T20 History: 2025ರ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಟಿ20 ಏಷ್ಯಾ ಕಪ್‌ನ ಇತಿಹಾಸದಲ್ಲಿ ಭಾರತ ತಂಡ ಮಾತ್ರ 200 ಕ್ಕಿಂತ ಹೆಚ್ಚು ರನ್ ಗಳಿಸಿದೆ (212 ರನ್). ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ (193 ರನ್). ಈ ಬಾರಿ ಹೊಸ ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆಯಿದೆ. ಯುವ ಆಟಗಾರರ ಆಕ್ರಮಣಕಾರಿ ಆಟದಿಂದ ಟೂರ್ನಿ ರೋಮಾಂಚಕಾರಿಯಾಗಲಿದೆ.
Updated on:Sep 04, 2025 | 5:39 PM

ಟಿ20 ಮಾದರಿಯಲ್ಲಿ ಮೂರನೇ ಬಾರಿಗೆ ನಡೆಯುತ್ತಿರುವ 2025 ರ ಏಷ್ಯಾಕಪ್ ಇದೇ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಈ ಬಾರಿಯ ಏಷ್ಯಾಕಪ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿವೆ. ಈ ಟೂರ್ನಿಯಲ್ಲಿ ಇದುವರೆಗೆ ಹಲವು ದಾಖಲೆಗಳು ನಿರ್ಮಾಣಗೊಂಡಿವೆ. ಆದರೆ ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಟೀಂ ಇಂಡಿಯಾ ನಿರ್ಮಿಸಿರುವ ಅದೊಂದು ದಾಖಲೆಯನ್ನು ಯಾವ ತಂಡಕ್ಕೂ ಮುರಿಯಲು ಸಾಧ್ಯವಾಗಿಲ್ಲ.

ಮೇಲೆ ಹೇಳಿದಂತೆ ಈ ಬಾರಿಯ ಏಷ್ಯಾಕಪ್ ಅನ್ನು ಟಿ20 ಸ್ವರೂಪದಲ್ಲಿ ಆಡಲಾಗುತ್ತಿದೆ. ವಿಶೇಷವೆಂದರೆ ಟಿ20 ಸ್ವರೂಪದಲ್ಲಿ ಆಡಲಾದ ಏಷ್ಯಾಕಪ್‌ನಲ್ಲಿ ಒಂದೇ ಒಂದು ತಂಡ ಮಾತ್ರ ಪಂದ್ಯವೊಂದರಲ್ಲಿ 200 ಕ್ಕಿಂತ ಹೆಚ್ಚು ರನ್ ಕಲೆಹಾಕಿದೆ. ಇದು ಇದುವರೆಗಿನ ದಾಖಲೆಯಾಗಿದ್ದು, ಈ ಬಾರಿ ಈ ದಾಖಲೆ ಮುರಿಯುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

ಟಿ20 ಏಷ್ಯಾಕಪ್ ಇತಿಹಾಸದಲ್ಲಿ ಇಲ್ಲಿಯವರೆಗೆ, ಒಂದು ತಂಡ ಮಾತ್ರ 200ರ ಗಡಿ ದಾಟಿದೆ. 2022 ರಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಕೇವಲ ಎರಡು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ ಈ ದಾಖಲೆ ನಿರ್ಮಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಂದ ಶತಕದ ಇನ್ನಿಂಗ್ಸ್ ಮೂಡಿಬಂದಿತ್ತು.

ಟೀಂ ಇಂಡಿಯಾವನ್ನು ಹೊರತುಪಡಿಸಿ ಪಾಕಿಸ್ತಾನ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 2022 ರಲ್ಲಿ ಹಾಂಗ್ ಕಾಂಗ್ ವಿರುದ್ಧದ ಶಾರ್ಜಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕ್ ತಂಡ ಎರಡು ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತ್ತು.

ವಿಶೇಷವೆಂದರೆ ಇಲ್ಲಿಯವರೆಗೆ ಏಷ್ಯಾಕಪ್ ಅನ್ನು ಎರಡು ಬಾರಿ ಟಿ 20 ಸ್ವರೂಪದಲ್ಲಿ ಆಡಲಾಗಿದೆ, ಆದರೆ ಈ ಪಂದ್ಯಾವಳಿಯ ಟಾಪ್ 7 ಸ್ಕೋರ್‌ಗಳು 2022 ರಲ್ಲಿ ಮಾತ್ರ ದಾಖಲಾಗಿದ್ದವು. ಇದಕ್ಕೂ ಮುನ್ನ 2016 ರಲ್ಲಿ, ಏಷ್ಯಾಕಪ್ ಅನ್ನು ಮೊದಲ ಬಾರಿಗೆ ಟಿ20 ಮಾದರಿಯಲ್ಲಿ ಆಡಲಾಗಿತ್ತು. ಆ ಆವೃತ್ತಿಯ ಅತ್ಯಧಿಕ ಸ್ಕೋರ್ ಓಮನ್ ಹೆಸರಿನಲ್ಲಿತ್ತು. ಓಮನ್ ಐದು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.

ಈ ಬಾರಿಯ ಏಷ್ಯಾಕಪ್ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಈ ವರ್ಷ ಕೆಲವು ಹೊಸ ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆಯಿದೆ. 2022 ರಿಂದ ಇಲ್ಲಿಯವರೆಗೆ ಕ್ರಿಕೆಟ್ ಆಡುವ ವಿಧಾನವೂ ಬದಲಾಗಿದ್ದು, ಆಕ್ರಮಣಕಾರಿಯಾಗಿ ಆಡುವ ಯುವ ಬ್ಯಾಟ್ಸ್‌ಮನ್‌ಗಳು ಹುಟ್ಟಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಟಿ20 ಏಷ್ಯಾಕಪ್ ಹೇಗೆ ಭಿನ್ನವಾಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Published On - 7:07 pm, Mon, 25 August 25




