
T20 World Cup 2024: ನ್ಯೂಯಾರ್ಕ್ನ ನಸ್ಸೌ ಸ್ಟೇಡಿಯಂನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಭಾರತ ಟಿ20 ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು.

ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮಹೇಂದ್ರ ಸಿಂಗ್ ಧೋನಿ 72 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 41 ಮ್ಯಾಚ್ಗಳಲ್ಲಿ ಗೆಲುವು ಸಾಧಿಸಿತ್ತು. ಈ ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟಿ20 ಕ್ಯಾಪ್ಟನ್ ಎಂಬ ದಾಖಲೆಯನ್ನು ಮಹೇಂದ್ರ ಸಿಂಗ್ ಧೋನಿ ಬರೆದಿದ್ದರು.

ಇದೀಗ ಈ ದಾಖಲೆಯನ್ನು ರೋಹಿತ್ ಶರ್ಮಾ ಅಳಿಸಿ ಹಾಕಿದ್ದಾರೆ. ಹಿಟ್ಮ್ಯಾನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈವರೆಗೆ 55 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ವೇಳೆ 42 ಪಂದ್ಯಗಳಲ್ಲಿ ಭಾರತ ತಂಡ ಜಯ ಸಾಧಿಸಿದೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಅತೀ ಹೆಚ್ಚು ಗೆಲುವು ತಂದುಕೊಟ್ಟ ನಾಯಕನೆಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.

ಇನ್ನು ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕ ಎಂಬ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಕ್ಯಾಪ್ಟನ್ ಬಾಬರ್ ಆಝಂ ಹೆಸರಿನಲ್ಲಿದೆ. ಪಾಕ್ ತಂಡವನ್ನು 81 ಪಂದ್ಯಗಳಲ್ಲಿ ಮುನ್ನಡೆಸಿರುವ ಬಾಬರ್ 46 ಬಾರಿ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.

ಇದೀಗ 42 ಪಂದ್ಯಗಳ ಜಯದೊಂದಿಗೆ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮುನ್ನುಗ್ಗಿದ್ದಾರೆ. ಅಲ್ಲದೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ಗೆದ್ದುಕೊಂಡರೆ, ಬಾಬರ್ ಆಝಂ ಅವರನ್ನು ಹಿಂದಿಕ್ಕಿ ರೋಹಿತ್ ಶರ್ಮಾ ನಾಯಕತ್ವದಲ್ಲೂ ವಿಶ್ವ ದಾಖಲೆ ಬರೆಯಲಿದ್ದಾರೆ.