T20 World Cup 2024: ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಬ್ರಾಂಡನ್ ಕಿಂಗ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಬ್ರಾಂಡನ್ ಸೈಡ್ ಸ್ಟ್ರೈನ್ ನೋವಿನ ಸಮಸ್ಯೆಗೆ ಒಳಗಾಗಿದ್ದರು.
ಇಂಗ್ಲೆಂಡ್ ವಿರುದ್ಧ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಬ್ರಾಂಡನ್ ಕಿಂಗ್ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದರಿಂದ ಅರ್ಧದಲ್ಲೇ ಪೆವಿಲಿಯನ್ಗೆ ಮರಳಿದ್ದರು. ಇದೀಗ ವೈದ್ಯಕೀಯ ವರದಿಯಲ್ಲಿ ಅವರು ಸೈಡ್ ಸ್ಟ್ರೈನ್ ಸಮಸ್ಯೆಗೆ ಒಳಗಾಗಿರುವುದು ತಿಳಿದು ಬಂದಿದ್ದು, ಹೀಗಾಗಿ ಹೆಚ್ಚಿನ ವಿಶ್ರಾಂತಿ ಸೂಚಿಸಲಾಗಿದೆ.
ಹಾಗಾಗಿ ವೆಸ್ಟ್ ಇಂಡೀಸ್ ತಂಡದ ಮುಂದಿನ ಪಂದ್ಯಗಳಲ್ಲಿ ಬ್ರಾಂಡನ್ ಕಿಂಗ್ ಕಣಕ್ಕಿಳಿಯುವುದಿಲ್ಲ. ಕಿಂಗ್ ಹೊರಗುಳಿಯುತ್ತಿದ್ದಂತೆ ವೆಸ್ಟ್ ಇಂಡೀಸ್ ಬದಲಿ ಆಟಗಾರನನ್ನು ಘೋಷಿಸಿದ್ದು, ಅದರಂತೆ ಎಡಗೈ ದಾಂಡಿಗ ಕೈಲ್ ಮೇಯರ್ಸ್ ಶನಿವಾರ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ವೆಸ್ಟ್ ಇಂಡೀಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯವು ವಿಂಡೀಸ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ವೆಸ್ಟ್ ಇಂಡೀಸ್ ತಂಡಕ್ಕೆ ಸೆಮಿಫೈನಲ್ಗೇರಲು ಅವಕಾಶ ಇರಲಿದೆ.
ಒಂದು ವೇಳೆ ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ಸೋತರೆ, ಇಂಗ್ಲೆಂಡ್ ತಂಡಕ್ಕೆ ಸೆಮಿಫೈನಲ್ಗೇರಲು ಅವಕಾಶ ಹೆಚ್ಚಾಗಲಿದೆ. ಅದರಂತೆ ಮುಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಗೆದ್ದರೆ, ಆತಿಥೇಯ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ನಿಂದ ಹೊರಬೀಳಲಿದೆ. ಹೀಗಾಗಿ ಮುಂದಿನ ಮ್ಯಾಚ್ ವಿಂಡೀಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.