Jasprit Bumrah: 131 ಪಂದ್ಯಗಳಿಂದ ಹೊರಗುಳಿದ ಬುಮ್ರಾ: ಐಪಿಎಲ್ಗೆ ಹಾಜರ್..!
Jasprit Bumrah: ಹೀಗೆ ಹೊರಗುಳಿದ ಪಂದ್ಯಗಳ ಸಂಖ್ಯೆಯೇ ನೂರನ್ನು ದಾಟಿರುವುದು ಅಚ್ಚರಿ. ಹಾಗಿದ್ರೆ ಬುಮ್ರಾ ತಮ್ಮ ಕೆರಿಯರ್ನಲ್ಲಿ ತಂಡದಿಂದ ಹೊರಗುಳಿದಿರುವ ಅಂಕಿ ಅಂಶಗಳೇನು ನೋಡೋಣ...
Updated on: Oct 04, 2022 | 5:32 PM

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಅವರಿಗೆ 6 ವಾರಗಳ ಕಾಲ ವಿಶ್ರಾಂತಿ ಸೂಚಿಸಲಾಗಿದೆ. ಅದರಂತೆ ಟಿ20 ವಿಶ್ವಕಪ್ ಬಳಿಕ ಕೂಡ ಬುಮ್ರಾ ಕೆಲ ವಾರಗಳ ಕಾಲ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಅಂದಹಾಗೆ ಜಸ್ಪ್ರೀತ್ ಬುಮ್ರಾ ಹೀಗೆ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ವಿಶ್ರಾಂತಿ ಹಾಗೂ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದರು. ಹೀಗೆ ಹೊರಗುಳಿದ ಪಂದ್ಯಗಳ ಸಂಖ್ಯೆಯೇ ನೂರನ್ನು ದಾಟಿರುವುದು ಅಚ್ಚರಿ. ಹಾಗಿದ್ರೆ ಬುಮ್ರಾ ತಮ್ಮ ಕೆರಿಯರ್ನಲ್ಲಿ ತಂಡದಿಂದ ಹೊರಗುಳಿದಿರುವ ಅಂಕಿ ಅಂಶಗಳೇನು ನೋಡೋಣ...

ಕಳೆದ ಮೂರೂವರೆ ವರ್ಷಗಳಲ್ಲಿ ಜಸ್ಪ್ರೀತ್ ಬುಮ್ರಾ 5 ಬಾರಿ ಗಾಯಗೊಂಡಿದ್ದಾರೆ. ಈ ವೇಳೆ ಹಲವು ಬಾರಿ ಕಂಬ್ಯಾಕ್ ಮಾಡಿದರೂ ಮತ್ತೆ ಗಾಯಗೊಂಡು ಹೊರಗುಳಿದಿದ್ದರು. ಇದೀಗ ಏಷ್ಯಾಕಪ್ನಿಂದ ಹೊರಗುಳಿದಿದ್ದ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬೆನ್ನಲ್ಲೇ ಮತ್ತೆ ಗಾಯಗೊಂಡು ಹೊರಗುಳಿಯಬೇಕಾಯಿತು. ಹೀಗೆ ಕಳೆದ ಮೂರುವರೆ ವರ್ಷಗಳಲ್ಲಿ 5 ಬಾರಿ ಗಾಯಗೊಂಡು ಹೊರಗುಳಿದರೆ, ಮತ್ತೆ ಹಲವು ಬಾರಿ ವಿಶ್ರಾಂತಿ ಪಡೆದಿದ್ದರು. ಅಂದರೆ...

2016 ರಲ್ಲಿ ಟೀಮ್ ಇಂಡಿಯಾ ಟಿ20 ತಂಡದ ಪರ ಪದಾರ್ಪಣೆ ಮಾಡಿದ್ದ ಜಸ್ಪ್ರೀತ್ ಬುಮ್ರಾ ಆ ಬಳಿಕ ಒಟ್ಟು 68 ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇಲ್ಲಿ ಅಚ್ಚರಿ ಅಂಶವೆಂದರೆ ಬುಮ್ರಾ ಟೀಮ್ ಇಂಡಿಯಾ ಪರ ಆಡಿರುವುದು ಕೇವಲ 60 ಟಿ20 ಪಂದ್ಯಗಳನ್ನು ಮಾತ್ರ. ಅಂದರೆ ಆಡಿದಕ್ಕಿಂತ ಹೊರಗುಳಿದದ್ದೇ ಹೆಚ್ಚು.


2016 ರಲ್ಲೇ ಏಕದಿನ ಕ್ರಿಕೆಟ್ಗೂ ಪಾದರ್ಪಣೆ ಮಾಡಿದ್ದ ಬುಮ್ರಾ 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಈ ವೇಳೆ ಹೊರಗುಳಿದಿರುವುದು ಬರೋಬ್ಬರಿ 49 ಏಕದಿನ ಪಂದ್ಯಗಳಲ್ಲಿ ಎಂಬುದು ವಿಶೇಷ.

2018 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯವಾಡಿದ್ದ ಯಾರ್ಕರ್ ಕಿಂಗ್, ಇದುವರೆಗೆ 30 ಟೆಸ್ಟ್ ಪಂದ್ಯವಾಡಿದ್ದಾರೆ. ಈ ವೇಳೆ 14 ಟೆಸ್ಟ್ ಪಂದ್ಯಗಳಿಂದ ಬುಮ್ರಾ ಹೊರಗುಳಿದಿದ್ದರು.

ಅಂದರೆ ಜಸ್ಪ್ರೀತ್ ಬುಮ್ರಾ ತಮ್ಮ ಕೆರಿಯರ್ನಲ್ಲಿ ಟೀಮ್ ಇಂಡಿಯಾದಿಂದ ಬರೋಬ್ಬರಿ 131 ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಇವೆಲ್ಲಕ್ಕಿಂತ ಆಶ್ಚರ್ಯಕರ ಸಂಗತಿ ಎಂದರೆ ಜಸ್ಪ್ರೀತ್ ಬುಮ್ರಾ ಇದೇ ಅವಧಿಯಲ್ಲಿ ಬರೋಬ್ಬರಿ 103 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಹೊರಗುಳಿದಿರುವುದು ಕೇವಲ 1 ಪಂದ್ಯದಿಂದ ಎಂಬುದೇ ಅಚ್ಚರಿ.




