Updated on: Jan 21, 2023 | 9:21 PM
Team India: ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ವಿಶೇಷ ಎಂದರೆ ಈ ಜಯದೊಂದಿಗೆ ಭಾರತ ತಂಡವು ತನ್ನದೇಯಾದ ಹಳೆಯ ದಾಖಲೆಯನ್ನು ಸಹ ಮುರಿದಿದೆ.
ಅಂದರೆ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ತವರಿನಲ್ಲಿ ಸತತವಾಗಿ 7 ಸರಣಿಗಳನ್ನು ಗೆದ್ದುಕೊಂಡಿದೆ. 2019 ರಿಂದ 2023 ರವರೆಗೆ ಭಾರತ ತಂಡವು ತವರಿನಲ್ಲಿ ಯಾವುದೇ ಏಕದಿನ ಸರಣಿ ಸೋತಿಲ್ಲ. ಇದುವೇ ಒಂದು ದಾಖಲೆಯಾಗಿದೆ.
ಈ ಹಿಂದೆ ಭಾರತ ತಂಡವು ಸತತವಾಗಿ 6 ಸರಣಿಗಳನ್ನು ಗೆದ್ದುಕೊಂಡಿತ್ತು. 2009 ರಿಂದ 2011 ರವರೆಗೆ ಮತ್ತು 2016 ರಿಂದ 2018 ರವರೆಗೆ ಟೀಮ್ ಇಂಡಿಯಾ ತವರಿನಲ್ಲಿ ಸತತವಾಗಿ ಆರು ದ್ವಿಪಕ್ಷೀಯ ಸರಣಿಗಳನ್ನು ವಶಪಡಿಸಿಕೊಂಡು ದಾಖಲೆ ಬರೆದಿತ್ತು.
ಇದೀಗ ಹಳೆಯ 6 ಸರಣಿ ಜಯದ ದಾಖಲೆ ಮುರಿದಿರುವ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ತವರಿನಲ್ಲಿ ಸತತವಾಗಿ 7 ಏಕದಿನ ಸರಣಿಗಳನ್ನು ಗೆದ್ದುಕೊಂಡಿದೆ. ಈ ಮೂಲಕ ತನ್ನದೆ ದಾಖಲೆಯನ್ನು ಅಳಿಸಿ ಹಾಕಿದೆ.
ಇನ್ನು ಭಾರತ ತಂಡವು ಕೊನೆಯ ಬಾರಿಗೆ ತವರಿನಲ್ಲಿ ಸರಣಿ ಸೋತಿದ್ದು 2019 ರಲ್ಲಿ. ಅಂದು ಆಸ್ಟ್ರೇಲಿಯಾ ಟೀಮ್ ಇಂಡಿಯಾಗೆ ಸೋಲುಣಿಸಿ ಸರಣಿ ಗೆಲುವಿಗೆ ಬ್ರೇಕ್ ಹಾಕಿದ್ದರು. ಇದಾದ ಬಳಿಕ ಮತ್ತೆ ತವರಿನಲ್ಲಿ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡ ಟೀಮ್ ಇಂಡಿಯಾ 2019 ರಿಂದ 2023ರವರೆಗೆ ಭಾರತದಲ್ಲಿ ಒಂದೇ ಏಕದಿನ ಸರಣಿ ಸೋತಿಲ್ಲ ಎಂಬುದೇ ವಿಶೇಷ.