Team India: ವಿಶ್ವ ದಾಖಲೆ ಬರೆದ ಎಜಾಝ್ ಪಟೇಲ್ಗೆ ವಿಶೇಷ ಗಿಫ್ಟ್ ನೀಡಿ ಗೌರವಿಸಿದ ಟೀಮ್ ಇಂಡಿಯಾ
India vs New zealand: 10 ವಿಕೆಟ್ಗಳ ಸಾಧನೆ ಮಾಡುತ್ತಿದ್ದಂತೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಅವರು ಎಜಾಝ್ ಪಟೇಲ್ ಅವರನ್ನು ಡ್ರೆಸಿಂಗ್ ರೂಮ್ನಲ್ಲಿ ಅಭಿನಂದಿಸಿದ್ದರು.
Updated on: Dec 06, 2021 | 7:21 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕಿವೀಸ್ ಸ್ಪಿನ್ನರ್ ಎಜಾಝ್ ಪಟೇಲ್ 10 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು.

ಈ ಮೂಲಕ 144 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎನಿಸಿಕೊಂಡರು. 47.5 ಓವರ್‌ಗಳಲ್ಲಿ 119 ರನ್ ನೀಡಿ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್‌ನ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆಯಂತಹ ದಿಗ್ಗಜರ ದಾಖಲೆಯನ್ನು ಎಜಾಝ್ ಪಟೇಲ್ ಸರಿಗಟ್ಟಿದರು. ಎಜಾಝ್ ಪಟೇಲ್ ಅವರ 10 ವಿಕೆಟ್ ಹೊರತಾಗಿಯೂ ನ್ಯೂಜಿಲೆಂಡ್ ತಂಡವು ಜಯ ಸಾಧಿಸಲು ಸಾಧ್ಯವಾಗಿಲ್ಲ.

ಇದಾಗ್ಯೂ ಈ ಅದ್ಭುತ ಸಾಧನೆ ಮಾಡಿದ ನ್ಯೂಜಿಲೆಂಡ್ ಸ್ಪಿನ್ನರ್ ಅನ್ನು ಟೀಮ್ ಇಂಡಿಯಾ ಗೌರವಿಸಿದೆ. ಪಂದ್ಯದ ಬಳಿಕ ಎಜಾಝ್ ಅವರನ್ನು ಭೇಟಿಯಾದ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಸಹಿ ಹಾಕಿರುವ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಸೋಲಿನ ನೋವಲ್ಲಿದ್ದ ಎಜಾಝ್ ಪಟೇಲ್ ಅವರನ್ನು ಗೌರವದೊಂದಿಗೆ ಟೀಮ್ ಇಂಡಿಯಾ ಬೀಳ್ಕೊಟ್ಟಿರುವುದು ವಿಶೇಷ.

ಈ ಫೋಟೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಟೀಮ್ ಇಂಡಿಯಾ ಆಟಗಾರರ ನಡೆಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇದಕ್ಕೂ ಮುನ್ನ 10 ವಿಕೆಟ್ಗಳ ಸಾಧನೆ ಮಾಡುತ್ತಿದ್ದಂತೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಅವರು ಎಜಾಝ್ ಪಟೇಲ್ ಅವರನ್ನು ಡ್ರೆಸಿಂಗ್ ರೂಮ್ನಲ್ಲಿ ಅಭಿನಂದಿಸಿದ್ದರು. ಇದೀಗ ಮತ್ತೊಮ್ಮೆ ಎಲ್ಲಾ ಆಟಗಾರರ ಸಹಿ ಹೊಂದಿರುವ ವಿಶೇಷ ಜೆರ್ಸಿಯನ್ನು ಗಿಫ್ಟ್ ನೀಡುವ ಮೂಲಕ ಎಜಾಝ್ ಪಟೇಲ್ ಅವರ ಸಾಧನೆಯನ್ನು ಸ್ಮರಣೀಯವಾಗಿಸಿದ್ದಾರೆ.
