
ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಿಂದ ಗೆದ್ದುಕೊಂಡಿದೆ. ಈ ಎರಡು ಗೆಲುವುಗಳೊಂದಿಗೆ ಟೀಮ್ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತನ್ನ ಜಯದ ಸಂಖ್ಯೆಯನ್ನು 922 ಕ್ಕೇರಿಸಿದೆ. ಈ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಅತ್ಯಧಿಕ ಗೆಲುವು ಕಂಡ 2ನೇ ತಂಡ ಎನಿಸಿಕೊಂಡಿದೆ.

ಇದಕ್ಕೂ ಮುನ್ನ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡವಿತ್ತು.1877 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಶುರು ಮಾಡಿದ್ದ ಆಂಗ್ಲರು ಈವರೆಗೆ 2117 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 921 ಮ್ಯಾಚ್ಗಳಲ್ಲಿ ಮಾತ್ರ. ಇನ್ನು 790 ಪಂದ್ಯಗಳಲ್ಲಿ ಸೋಲುಂಡರೆ 11 ಮ್ಯಾಚ್ಗಳು ಟೈ ಆಗಿವೆ. ಹಾಗೆಯೇ 219 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ.

ಇದೀಗ ಗೆಲುವಿನ ಲೆಕ್ಕಾಚಾರದಲ್ಲಿ ಆಂಗ್ಲರನ್ನು ಹಿಂದಿಕ್ಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಶುಭ್ಮನ್ ಗಿಲ್ ಮುಂದಾಳತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದ ಭಾರತ ತಂಡವು ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಢಿದೆ.

1932 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಶುರು ಮಾಡಿದ ಟೀಮ್ ಇಂಡಿಯಾ ಈವರೆಗೆ 1916 ಪಂದ್ಯಗಳನ್ನಾಡಿದೆ. ಈ ವೇಳೆ 922 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, 702 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನು 18 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡರೆ, 50 ಮ್ಯಾಚ್ಗಳು ಡ್ರಾ ಆಗಿವೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾ. 1877 ರಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿರುವ ಆಸೀಸ್ ಪಡೆ ಈವರೆಗೆ 2107 ಮ್ಯಾಚ್ಗಳಲ್ಲಿ ಕಣಕ್ಕಿಳಿದಿವೆ. ಈ ವೇಳೆ 1158 ಗೆಲುವು, 676 ಸೋಲು, 14 ಟೈ ಹಾಗೂ 219 ಡ್ರಾ ಸಾಧಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾವಿರಕ್ಕೂ ಅಧಿಕ ಗೆಲುವು ಕಂಡ ವಿಶ್ವ ಏಕೈಕ ತಂಡ ಎನಿಸಿಕೊಂಡಿದೆ.