ಗೆದ್ದರೂ WTC ಅಂಕಪಟ್ಟಿಯಲ್ಲಿ ಮೇಲೇರದ ಟೀಮ್ ಇಂಡಿಯಾ
WTC Points Table: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ನೂತನ ಪಾಯಿಂಟ್ಸ್ ಟೇಬಲ್ ಬಿಡುಗಡೆಯಾಗಿದೆ. ಹೊಸ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಟಾಪ್-5 ನಲ್ಲಿ ಕಾಣಿಸಿಕೊಂಡಿದೆ. ಇನ್ನು ಪಾಕಿಸ್ತಾನ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್ ತಂಡಗಳು WTC ನಲ್ಲಿ ಗೆಲುವಿನ ಖಾತೆ ತೆರೆಯಬೇಕಿದೆ.
Updated on: Oct 14, 2025 | 1:53 PM

ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 140 ರನ್ಗಳ ಜಯ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ಗಳ ಗೆಲುವು ದಾಖಲಿಸಿದೆ.

ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು ಭಾರತ ತಂಡ 2-0 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ನೂತನ ಅಂಕ ಪಟ್ಟಿ ಬಿಡುಗಡೆಯಾಗಿದೆ. ಆದರೆ ಈ ಭರ್ಜರಿ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾ WTC ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಲ್ಲ ಎಂಬುದು ವಿಶೇಷ.

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನದಲ್ಲಿದೆ. ಆಸೀಸ್ ಪಡೆ ಈವರೆಗೆ ಆಡಿರುವ 3 ಟೆಸ್ಟ್ ಪಂದ್ಯಗಳಲ್ಲೂ ಜಯ ಸಾಧಿಸಿದ್ದು, ಈ ಮೂಲಕ 100 ಶೇಕಡಾವಾರಿನೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಇನ್ನು ದ್ವಿತೀಯ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, ಲಂಕಾ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಆಡಿದ 2 ಮ್ಯಾಚ್ಗಳಲ್ಲಿ ಒಂದು ಗೆಲುವು ಹಾಗೂ ಒಂದು ಡ್ರಾನೊಂದಿಗೆ 66.67 ಶೇಕಡಾವಾರು ಹೊಂದಿದೆ. ಈ ಮೂಲಕ WTC ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 2 ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಟೀಮ್ ಇಂಡಿಯಾ ಈವರೆಗೆ 7 ಪಂದ್ಯಗಳನ್ನಾಡಿದ್ದು, ಈ ವೇಳೆ 4 ಗೆಲುವು, 2 ಸೋಲು ಹಾಗೂ ಒಂದು ಡ್ರಾ ಸಾಧಿಸಿದೆ. ಈ ಮೂಲಕ 61.90 ಶೇಕಡಾವಾರು ಅಂಕ ಪಡೆಯುವ ಮೂಲಕ WTC ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಇನ್ನು ಇಂಗ್ಲೆಂಡ್ ತಂಡವು 43.33 ಶೇಕಡಾವಾರು ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದರೆ, ಬಾಂಗ್ಲಾದೇಶ್ ತಂಡವು 16.67 ಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದೆ. ಅತ್ತ ವೆಸ್ಟ್ ಇಂಡೀಸ್ ತಂಡವು 5 ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ್, ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ಇನ್ನೂ ಸಹ WTC ಅಂಕಪಟ್ಟಿಯಲ್ಲಿ ಖಾತೆ ತೆರೆದಿಲ್ಲ.
