- Kannada News Photo gallery Cricket photos *IPL 2026: Sanju Samson to Delhi Capitals? Trade Window Buzz Heats Up
IPL 2026: ಸಿಎಸ್ಕೆ ಅಲ್ಲ.. ಈ ತಂಡಕ್ಕೆ ಸಂಜು ಸ್ಯಾಮ್ಸನ್ ಟ್ರೇಡ್?
Sanju Samson: ಐಪಿಎಲ್ 2026 ಕ್ಕಾಗಿ ಸಿದ್ಧತೆಗಳು ಶುರುವಾಗಿವೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬಂದು ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಕುರಿತು ಚರ್ಚೆ ನಡೆಯುತ್ತಿದೆ. ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ವಿಂಡೋ ಮೂಲಕ ಈ ವರ್ಗಾವಣೆ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಸಂಜುಗಾಗಿ ಆಸಕ್ತಿ ತೋರಿಸಿದ್ದು, ಐಪಿಎಲ್ ಟ್ರೇಡ್ ವಿಂಡೋ ನಿಯಮಗಳ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ.
Updated on: Oct 15, 2025 | 9:19 PM

2026 ರ ಐಪಿಎಲ್ಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ವರದಿಯ ಪ್ರಕಾರ ಡಿಸೆಂಬರ್ 15 ರೊಳಗೆ ಮಿನಿ ಹರಾಜು ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿ ಯಾರನ್ನು ಉಳಿಸಿಕೊಳ್ಳಬೇಕು? ಯಾರನ್ನು ತಂಡದಿಂದ ಕೈಬಿಡಬೇಕು ಎಂಬ ಸಿದ್ಧತೆಯಲ್ಲಿ ತೊಡಗಿವೆ. ಹಾಗೆಯೇ ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ಮೂಲಕ ಯಾರನ್ನು ಖರೀದಿಸಬಹುದು ಎಂಬುದನ್ನು ಯೋಚಿಸುತ್ತಿವೆ.

ಇದೆಲ್ಲದರ ನಡುವೆ ಸಂಜು ಸ್ಯಾಮ್ಸನ್ ಯಾವ ತಂಡ ಸೇರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯುವುದಕ್ಕೆ ಮುಂದಾಗಿರುವ ಸಂಜುಗಾಗಿ ಹಲವು ಫ್ರಾಂಚೈಸಿಗಳು ಕಾದುಕುಳಿತಿವೆ. ಆದಾಗ್ಯೂ ಅವರನ್ನು ಮಿನಿ ಹರಾಜಿನಲ್ಲಿ ಖರೀದಿಸಲಾಗುತ್ತದೋ ಅಥವಾ ಟ್ರೇಡಿಂಗ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೋ ಎಂಬುದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ.

ಹೀಗಿರುವಾಗ ಸಂಜು ಸ್ಯಾಮ್ಸನ್ಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಟ್ರೇಡಿಂಗ್ ಮೂಲಕ ಸೇರಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಂಜುರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗುತ್ತಿತ್ತು.

ಆದರೀಗ ಮಾಧ್ಯಮ ವರದಿಗಳ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಟ್ರೇಡ್ ವಿಂಡೋ ಅಡಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ಹೊಂದಿದೆ. ಆದಾಗ್ಯೂ, ಈ ಒಪ್ಪಂದಕ್ಕೆ ಯಾವ ಆಟಗಾರನನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂಬ ಪ್ರಶ್ನೆ ಉಳಿದಿದೆ. ಇದುವರೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲವಾದರೂ ಈ ಮಾಹಿತಿ ನಿಜವಾದರೆ, ಸಂಜು ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ತಂಡದ ಪರ ಬ್ಯಾಟ್ ಬೀಸಲಿದ್ದಾರೆ.

ಐಪಿಎಲ್ ಟ್ರೇಡ್ ವಿಂಡೋ ಎಂಬುದು ತಂಡಗಳು ಹರಾಜಿನ ಮೊದಲು ಅಥವಾ ನಂತರ ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಅನುಮತಿಸುವ ನಿಯಮವಾಗಿದೆ. ಪ್ರಸ್ತುತ, ಐಪಿಎಲ್ 2026 ಕ್ಕೆ ಟ್ರೇಡ್ ವಿಂಡೋ ತೆರೆದಿದೆ. ಐಪಿಎಲ್ ಸೀಸನ್ ಮುಗಿದ ಒಂದು ತಿಂಗಳ ನಂತರ ಟ್ರೇಡ್ ವಿಂಡೋ ತೆರೆಯುತ್ತದೆ ಮತ್ತು ಹರಾಜಿನ ಒಂದು ವಾರಕ್ಕೆ ಮೊದಲು ಮುಚ್ಚಲಿದೆ. ಈ ವಿಂಡೋದ ಅಡಿಯಲ್ಲಿ, ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಹಣ ನೀಡಿ ಖರೀದಿಸಬಹುದಾಗಿದೆ.
