ಬವುಮಾ ಭರ್ಜರಿ ಬ್ಯಾಟಿಂಗ್ಗೆ ಬಾಬರ್ ವಿಶ್ವ ದಾಖಲೆಯೇ ಬ್ರೇಕ್
WTC Final SA vs AUS: ಲಾರ್ಡ್ಸ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಂಬಾ ಬವುಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 65 ರನ್ ಬಾರಿಸಿರುವ ಬವುಮಾ ಇದೀಗ ಸೌತ್ ಆಫ್ರಿಕಾ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ.
Updated on:Jun 14, 2025 | 11:50 AM

ಟೆಸ್ಟ್ ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಸ್ಥಿರ ಪ್ರದರ್ಶನ ನೀಡುವ ಮೂಲಕ ಎಂಬುದು ವಿಶೇಷ. ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಬವುಮಾ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 36 ರನ್ ಬಾರಿಸಿದ್ದ ಟೆಂಬಾ ಬವುಮಾ, ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 65 ರನ್ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ 30+ ಸ್ಕೋರ್‌ಗಳನ್ನು ಗಳಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ದ್ವಿತೀಯ ಸ್ಥಾನದಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಕಾಣಿಸಿಕೊಂಡಿದ್ದರು. ಬಾಬರ್ ಒಟ್ಟು 8 ಬಾರಿ ಸತತ 30+ ಸ್ಕೋರ್ಗಳಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಟೆಂಬಾ ಬವುಮಾ ಯಶಸ್ವಿಯಾಗಿದ್ದಾರೆ.

ಟೆಂಬಾ ಬವುಮಾ ಸತತ 9 ಇನಿಂಗ್ಸ್ಗಳಲ್ಲಿ 30+ ಸ್ಕೋರ್ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಬ್ಯಾಟರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇಂಗ್ಲೆಂಡ್ನ ಟೆಡ್ ಡೆಕ್ಸ್ಟರ್. 60ರ ದಶಕದಲ್ಲಿ ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯಗಳನ್ನಾಡಿದ್ದ ಡೆಕ್ಸ್ಟರ್ 11 ಪಂದ್ಯಗಳಲ್ಲಿ ಸತತ 30+ ಸ್ಕೋರ್ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯ ಸನಿಹಕ್ಕೆ ತಲುಪಿರುವ ಟೆಂಬಾ ಬವುಮಾ ಮುಂದಿನ ಮೂರು ಟೆಸ್ಟ್ ಇನಿಂಗ್ಸ್ಗಳಲ್ಲಿ 30+ ಸ್ಕೋರ್ಗಳಿಸಿದರೆ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.

WTC Final: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 207 ರನ್ಗಳಿಗೆ ಆಲೌಟ್ ಆಗಿದೆ. ಅತ್ತ ಮೊದಲ ಇನಿಂಗ್ಸ್ನಲ್ಲಿ 74 ರನ್ಗಳ ಹಿನ್ನಡೆ ಹೊಂದಿದ್ದ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 282 ರನ್ಗಳ ಗುರಿ ಪಡೆದುಕೊಂಡಿದೆ. ಅದರಂತೆ ಮೂರನೇ ದಿನದಾಟದ ಅಂತ್ಯಕ್ಕೆ ಸೌತ್ ಆಫ್ರಿಕಾ 2 ವಿಕೆಟ್ ಕಳೆದುಕೊಂಡು 213 ರನ್ಗಳಿಸಿದ್ದು, ನಾಲ್ಕನೇ ದಿನದಾಟದಲ್ಲಿ 69 ರನ್ಗಳಿಸಿದರೆ ಚಾಂಪಿಯನ್ ಪಟ್ಟ ಅಲಂಕರಿಸಬಹುದು.
Published On - 9:03 am, Sat, 14 June 25




