
ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (CPL) ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಸಹ ಶರವೇಗದ ಶತಕದೊಂದಿಗೆ... ಅಂತಹದೊಂದು ತೂಫಾನ್ ಶತಕ ಸಿಡಿಸಿದ್ದು ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಆರಂಭಿಕ ದಾಂಡಿಗ ಟಿಮ್ ಸೈಫರ್ಟ್ (Tim Seifert).

ಸೇಂಟ್ ಲೂಸಿಯಾದ ಡಾರೆನ್ ಸ್ಯಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅಂಟಿಗುವಾ ಅ್ಯಂಡ್ ಬರ್ಬುಡಾ ಫಾಲ್ಕನ್ಸ್ ಮತ್ತು ಸೇಂಟ್ ಲೂಸಿಯಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಮ್ಯಾಚ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಂಟಿಗುವಾ ಅ್ಯಂಡ್ ಬರ್ಬುಡಾ ಫಾಲ್ಕನ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 204 ರನ್ ಕಲೆಹಾಕಿದ್ದರು.

205 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಟಿಮ್ ಸೈಫರ್ಟ್ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್‌ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸೈಫರ್ಟ್ ಸಿಕ್ಸ್ - ಫೋರ್ ಗಳ ಸುರಿಮಳೆಗೈದರು. ಈ ಸಿಡಿಲಬ್ಬರೊಂದಿಗೆ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.

ಈ ಸ್ಫೋಟಕ ಸೆಂಚುರಿಯೊಂದಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ವೇಗದ ಶತಕ ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಲ್ಲದೆ ಸಿಪಿಎಲ್ ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಕೆರಿಬಿಯನ್ ಪ್ರಿಮಿಯರ್ ಲೀಗ್‍ನಲ್ಲಿ ಅತೀ ವೇಗದ ಶತಕದ ಸಿಡಿಸಿದ ದಾಖಲೆ ಆ್ಯಂಡ್ರೆ ರಸೆಲ್ (40 ಎಸೆತಗಳು) ಹೆಸರಿನಲ್ಲಿತ್ತು. ಇದೀಗ ಅಜೇಯ ಶತಕದೊಂದಿಗೆ ಟಿಮ್ ಸೈಫರ್ಟ್ ಈ ದಾಖಲೆಯನ್ನ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಲೆಕ್ಸ್ ಹೇಲ್ಸ್ (47 ಎಸೆತಗಳು) ಹೆಸರಿನಲ್ಲಿದ್ದ ಅತೀ ವೇಗದ ಸೆಂಚುರಿ ಬಾರಿಸಿದ ವಿದೇಶಿಗನ ದಾಖಲೆಯನ್ನು ಟಿಮ್ ಸೈಫರ್ಟ್ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಿಮ್ ಸೈಫರ್ಟ್ 53 ಎಸೆತಗಳಲ್ಲಿ 9 ಸಿಕ್ಸ್, 10 ಫೋರ್ಗಳೊಂದಿಗೆ ಅಜೇಯ 125 ರನ್ ಬಾರಿಸಿದರು. ಈ ಬಿರುಗಾಳಿ ಬ್ಯಾಟಿಂಗ್ ನೆರವಿನೊಂದಿಗೆ ಈ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಭರ್ಜರಿ ಜಯ ಸಾಧಿಸಿದೆ. ಅದು ಸಹ 17.5 ಎಸೆತಗಳಲ್ಲಿ 206 ಎನ್ ಬಾರಿಸಿ, 6 ವಿಕೆಟ್‌ಗಳ ಅಮೋಘ ಜಯ ಸಾಧಿಸುವ ಮೂಲಕ ಎಂಬುದು ವಿಶೇಷ.
Published On - 7:55 am, Mon, 1 September 25