IND vs AUS: ಭಾರತಕ್ಕೆ ತಲೆನೋವಾಗಿದ್ದ ಹೆಡ್ಗೆ ಇಂಜುರಿ..! ಉಳಿದ ಪಂದ್ಯಗಳಿಗೆ ಅನುಮಾನ?
Travis Head Injury: ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ತೊಡೆಸಂದು ಗಾಯದಿಂದ ಬಳಲುತ್ತಿರುವುದು ಆತಿಥೇಯ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಾಕ್ಸಿಂಗ್ ಡೇ ಟೆಸ್ಟ್‌ನಿಂದ ಅವರು ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಅವರು ಮೆಲ್ಬೋರ್ನ್ ಟೆಸ್ಟ್‌ಗೆ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
Updated on: Dec 18, 2024 | 3:40 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬ್ರಿಸ್ಬೇನ್ನ ಗಾಬಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ಐದು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1ರಲ್ಲಿ ಸಮಬಲಗೊಂಡಿದೆ. ಇದೀಗ ಸರಣಿಯ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಆದರೆ ಅದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದ್ದು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೆಡ್ ತೊಡೆಸಂದು ಸಮಸ್ಯೆಯಿಂದ ಬಳಲುತ್ತಿದ್ದು, ಅವರೀಗ ಬಾಕ್ಸಿಂಗ್ ಡೇ ಟೆಸ್ಟ್‌ನಿಂದ ಹೊರಗುಳಿಯಬಹುದು ಎಂದು ಹೇಳಲಾಗುತ್ತಿದೆ.

ಆದರೆ ತಮ್ಮ ಫಿಟ್ನೆಸ್ ಬಗ್ಗೆ ಅಪ್ಡೇಟ್ ನೀಡಿರುವ ಹೆಡ್, ‘ಎಂಸಿಜಿಯಲ್ಲಿ ನಡೆಯುವ ನಾಲ್ಕನೇ ಟೆಸ್ಟ್ ವೇಳೆಗೆ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ ಎಂದಿದ್ದಾರೆ. ಗಾಬಾದಲ್ಲಿ 152 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಹೆಡ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಪಂದ್ಯದ ಬಳಿಕ ಮಾತನಾಡಿದ ಅವರು, ನನ್ನ ಬ್ಯಾಟಿಂಗ್‌ನಿಂದ ತುಂಬಾ ಸಂತೋಷವಾಗಿದೆ. ಸ್ವಲ್ಪ ಊತವಿದ್ದರೂ ಮುಂದಿನ ಪಂದ್ಯದ ವೇಳೆಗೆ ಚೇತರಿಸಿಕೊಳ್ಳಲಿದ್ದೇನೆ ಎಂದಿದ್ದಾರೆ.

ಈಗ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟ್ರಾವಿಸ್ ಹೆಡ್ ಟೀಂ ಇಂಡಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಮತ್ತು ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಅವರ ವಿಕೆಟ್ ಪಡೆಯುವುದು ಟೀಂ ಇಂಡಿಯಾಕ್ಕೆ ಕಷ್ಟದ ಕೆಲಸ ಎಂದು ಸಾಬೀತಾಗಿದೆ. ಹೀಗಿರುವಾಗ ನಾಲ್ಕನೇ ಟೆಸ್ಟ್‌ನಿಂದ ಹೆಡ್ ಹೊರಬಿದ್ದರೆ ಟೀಂ ಇಂಡಿಯಾ ನೆಮ್ಮದಿಯ ನಿಟ್ಟುಸಿರು ಬಿಡಲಿದೆ.

ಇಷ್ಟೇ ಅಲ್ಲ, ಆಸ್ಟ್ರೇಲಿಯ ತಂಡದಲ್ಲಿ ಹೆಡ್ ಇಲ್ಲದಿರುವುದು ಟೀಂ ಇಂಡಿಯಾದ ಡಬ್ಲ್ಯುಟಿಸಿ ಫೈನಲ್ ಆಡುವ ನಿರೀಕ್ಷೆಯನ್ನು ಹೆಚ್ಚಿಸಲಿದೆ. ಮುಂದಿನ ಪಂದ್ಯದಲ್ಲಿ ಹೆಡ್ ಇಲ್ಲದಿದ್ದರೆ, ಆಸ್ಟ್ರೇಲಿಯದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿ ಕಾಣಲಿದೆ. ಹೀಗಾಗಿ ಹೆಡ್ ಅಲಭ್ಯತೆಯ ಲಾಭವನ್ನು ಭಾರತೀಯ ಬೌಲರ್‌ಗಳು ಖಂಡಿತವಾಗಿಯೂ ಪಡೆಯಬಹುದು.

ಈ ಸರಣಿಯಲ್ಲಿ ರನ್‌ಗಳ ಶಿಖರ ಕಟ್ಟಿರುವ ಹೆಡ್ ಆಡಿರುವ ಮೂರು ಪಂದ್ಯಗಳಲ್ಲಿ 81.80 ಸರಾಸರಿಯಲ್ಲಿ 409 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಸೇರಿವೆ. ಅಲ್ಲದೆ ಅವರು ಪರ್ತ್‌ನಲ್ಲಿ 89 ರನ್‌ಗಳ ಇನ್ನಿಂಗ್ಸ್ ಕೂಡ ಆಡಿದ್ದರು.
