ಏಳು ಕಡೆ ಹೆಡ್ ‘ಮಾಸ್ಟರ್’ ಸ್ಟ್ರೋಕ್
Travis Head Record: ಈ ಬಾರಿಯ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ 123 ರನ್ ಬಾರಿಸಿ ಅಬ್ಬರಿಸಿದ್ದ ಟ್ರಾವಿಡ್ ಹೆಡ್, ದ್ವಿತೀಯ ಪಂದ್ಯದಲ್ಲಿ ವಿಸ್ಫೋಟಕ 170 ರನ್ ಕಲೆಹಾಕಿದ್ದರು. ಇದೀಗ ಐದನೇ ಟೆಸ್ಟ್ ಪಂದ್ಯದಲ್ಲಿ 163 ರನ್ಗಳ ಇನಿಂಗ್ಸ್ ಆಡಿದ್ದಾರೆ. ಈ ಭರ್ಜರಿ ಸೆಂಚುರಿಯೊಂದಿಗೆ ಹೆಡ್ ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
Updated on: Jan 07, 2026 | 10:53 AM

ಆಸ್ಟ್ರೇಲಿಯಾದಲ್ಲಿರುವ ಏಳು ಪ್ರಮುಖ ಸ್ಟೇಡಿಯಂಗಳಲ್ಲಿ ಟೆಸ್ಟ್ ಶತಕ ಬಾರಿಸಿದ ದಾಂಡಿಗರ ಪಟ್ಟಿಗೆ ಮಾಸ್ಟರ್ ಸ್ಟ್ರೋಕ್ ದಾಂಡಿಗ ಟ್ರಾವಿಸ್ ಹೆಡ್ (Travis Head) ಸೇರ್ಪಡೆಯಾಗಿದ್ದಾರೆ. ಅದು ಸಹ ಎಂಸಿಜಿಯಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.

ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್ 163 ರನ್ಗಳ ಇನಿಂಗ್ಸ್ ಆಡಿದ್ದಾರೆ. ಈ ಶತಕದೊಂದಿಗೆ ಆಸ್ಟ್ರೇಲಿಯಾದ 7 ಸ್ಟೇಡಿಯಂಗಳಲ್ಲಿ ಟೆಸ್ಟ್ ಶತಕ ಸಿಡಿಸಿದ 5ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಟ್ರಾವಿಸ್ ಹೆಡ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಸಾಧನೆ ಮಾಡಿರುವುದು ಆಸ್ಟ್ರೇಲಿಯಾದ ಲೆಜೆಂಡ್ಸ್ಗಳಾದ ಸ್ಟೀವ್ ವಾ, ಜಸ್ಟಿನ್ ಲ್ಯಾಂಗರ್, ಮ್ಯಾಥ್ಯೂ ಹೇಡನ್ ಹಾಗೂ ಡೇವಿಡ್ ವಾರ್ನರ್. ಇವರೆಲ್ಲರೂ ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್, ಸಿಡ್ನಿ, ಹೊಬಾರ್ಟ್, ಪರ್ತ್, ಕೈರ್ನ್ಸ್ ಹಾಗೂ ಡಾರ್ವಿನ್ (ಸ್ಟೀವ್ ವಾ ಮಾತ್ರ) ಸ್ಟೇಡಿಯಂಗಳಲ್ಲಿ ಶತಕ ಸಿಡಿಸಿದ್ದರು.

ಇದೀಗ ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್, ಸಿಡ್ನಿ, ಹೊಬಾರ್ಟ್, ಪರ್ತ್ ಹಾಗೂ ಕ್ಯಾನ್ಬೆರಾದಲ್ಲಿ ಟೆಸ್ಟ್ ಸೆಂಚುರಿಗಳನ್ನು ಸಿಡಿಸುವ ಮೂಲಕ ಟ್ರಾವಿಸ್ ಹೆಡ್ ಕೂಡ ಈ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೆಡ್ ಈ ಸಾಧನೆ ಮಾಡಿರುವುದು ಕೇವಲ 65 ಟೆಸ್ಟ್ ಪಂದ್ಯಗಳ ಮೂಲಕ ಎಂಬುದು ವಿಶೇಷ.

ಅಲ್ಲದೆ ಈ ಶತಕದೊಂದಿಗೆ ಆ್ಯಶಸ್ ಸರಣಿಯೊಂದರಲ್ಲಿ 3 ಸೆಂಚುರಿ ಸಿಡಿಸಿದ ಆರಂಭಿಕ ದಾಂಡಿಗರ ಪಟ್ಟಿಯಲ್ಲೂ ಹೆಡ್ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ 123 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಮ್ಯಾಚ್ನಲ್ಲಿ 170 ರನ್ ಸಿಡಿಸಿದ್ದರು. ಇದೀಗ 163 ರನ್ ಕಲೆಹಾಕಿದ್ದಾರೆ. ಈ ಮೂಲಕ ಮ್ಯಾಥ್ಯೂ ಹೇಡನ್ ಬಳಿಕ ಆಸ್ಟ್ರೇಲಿಯಾ ಪರ ಆ್ಯಶಸ್ ಸರಣಿಯೊಂದರಲ್ಲಿ 3 ಸೆಂಚುರಿ ಸಿಡಿಸಿದ ಆರಂಭಿಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ಸಹ ಟ್ರಾವಿಸ್ ಹೆಡ್ ತಮ್ಮದಾಗಿಸಿಕೊಂಡಿದ್ದಾರೆ.
