
ಹರಾರೆಯಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಸಿದ ಭಾರತ ಯುವ ಪಡೆ ದಾಖಲೆಯ 6ನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಆಯುಷ್ ಮ್ಹಾತ್ರೆ ತಂಡದ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ವಿಶ್ವ ಕ್ರಿಕೆಟ್ ಮುಂದೆ ಭಾರತದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ ಯುವ ಟೀಂ ಇಂಡಿಯಾಕ್ಕೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಿಸಿದೆ.

ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ದಾಖಲೆಯ 311 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 311 ರನ್ಗಳಿಗೆ ಆಲೌಟ್ ಆಗಿ 100 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಹೀಗಾಗಿ ಚಾಂಪಿಯನ್ ಭಾರತಕ್ಕೆ ಐಸಿಸಿ ಕಡೆಯಿಂದ ಟ್ರೋಫಿ ಹಾಗೂ ಪದಕ ಸಿಕ್ಕಿತ್ತು. ಆದರೆ ನಗದು ರೂಪದಲ್ಲಿ ಯಾವುದೇ ಬಹುಮಾನ ಸಿಕ್ಕಿರಲಿಲ್ಲ.

ವಾಸ್ತವವಾಗಿ ಈ ಪಂದ್ಯಾವಳಿಯನ್ನು ಯುವ ಆಟಗಾರರಿಗೆ ಅಭಿವೃದ್ಧಿ ವೇದಿಕೆಯಾಗಿ ಆಡಲಾಗುತ್ತಿರುವುದರಿಂದ ಐಸಿಸಿ ಅಂಡರ್-19 ಮಟ್ಟದಲ್ಲಿ ಯಾವುದೇ ನಗದು ಬಹುಮಾನವನ್ನು ವಿತರಿಸುವುದಿಲ್ಲ. ಹೀಗಾಗಿ ಟ್ರೋಫಿ ಮತ್ತು ಪದಕದೊಂದಿಗೆ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳುತ್ತಿದ್ದಾರೆ. ಇದೀಗ ಬಿಸಿಸಿಐ ಚಾಂಪಿಯನ್ ಭಾರತ ತಂಡಕ್ಕೆ ಭರ್ಜರಿ ನಗದು ಬಹುಮಾನ ಘೋಷಿಸಿದೆ.

ಇಂಗ್ಲೆಂಡ್ ತಂಡವನ್ನು ಮಣಿಸಿ 6ನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದ್ದ ಭಾರತ ಯುವ ಪಡೆಗೆ ಬಿಸಿಸಿಐ 7.5 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಬಹುಮಾನದ ಮೊತ್ತವನ್ನು ಈ ಪಂದ್ಯಾವಳಿಯಲ್ಲಿ ತಂಡದ ಭಾಗವಾಗಿದ್ದ ಆಟಗಾರರು, ಕೋಚಿಂಗ್ ಸಿಬ್ಬಂದಿಗಳಿಗೆ ಹಂಚಲಾಗುವುದು. ಬಿಸಿಸಿಐ ಈ ರೀತಿ ಬಹುಮಾನ ಘೋಷಿಸಿರುವುದು ಇದೇ ಮೊದಲಲ್ಲ.

ಇದಕ್ಕೂ ಮುನ್ನ ಬಿಸಿಸಿಐ ಅಂಡರ್ 19 ವಿಶ್ವಕಪ್ ಗೆದ್ದ ತಂಡಗಳಿಗೆ ನಗದು ಬಹುಮಾನ ಘೋಷಿಸಿತ್ತು. 2024 ರ ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 30 ಲಕ್ಷ ರೂ. ಬಹುಮಾನ ನೀಡಿತ್ತು. ಅದೇ ರೀತಿ, 2025 ರ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಗೆದ್ದಿದ್ದ ವನಿತಾ ಪಡೆಗೆ ಬಿಸಿಸಿಐ 5 ಕೋಟಿ ರೂ. ಬಹುಮಾನ ನೀಡಿತ್ತು. ಅದರಂತೆ ಈ ಬಾರಿಯೂ ಸಹ ಬಿಸಿಸಿಐ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ತರಬೇತಿ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಿದೆ.
Published On - 4:36 pm, Sat, 7 February 26