ವಿರಾಟ್ ಕೊಹ್ಲಿಗೆ ಸಾಧ್ಯವಾಗದಿರುವುದನ್ನ ಸಾಧಿಸಿ ತೋರಿಸಿದ ವೈಭವ್ ಸೂರ್ಯವಂಶಿ
Vaibhav Suryavanshi Records: ಕಿರಿಯರ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಯುಎಸ್ಎ ವಿರುದ್ಧ ಮೊದಲ ಪಂದ್ಯ ಗೆದ್ದಿದ್ದ ಭಾರತ ತಂಡವು ಇದೀಗ ಬಾಂಗ್ಲಾದೇಶ್ ತಂಡಕ್ಕೂ ಮಣ್ಣು ಮುಕ್ಕಿಸಿದೆ. ಬಾಂಗ್ಲಾ ವಿರುದ್ಧದ ಮ್ಯಾಚ್ನಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ವೈಭವ್ ಸೂರ್ಯವಂಶಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಕೊಹ್ಲಿಯ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.
Updated on: Jan 18, 2026 | 8:03 AM

ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ದಾಖಲೆಯೊಂದಿಗೆ ಯುವ ಎಡಗೈ ದಾಂಡಿಗ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಝಿಂಬಾಬ್ವೆಯಲ್ಲಿ ನಡೆದ ಅಂಡರ್-19 ವಿಶ್ವಕಪ್ನ 7ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ವೈಭವ್ ಸೂರ್ಯವಂಶಿ 67 ಎಸೆತಗಳಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 72 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ವೈಭವ್ ಯೂತ್ ಒಡಿಐ ಕ್ರಿಕೆಟ್ನಲ್ಲಿ 1000 ರನ್ ಪೂರೈಸಿದ್ದಾರೆ.

ಈ ಸಾವಿರ ರನ್ಗಳೊಂದಿಗೆ ಯೂತ್ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಗೆ ಸಾಧ್ಯವಾಗದಿರುವುದನ್ನು ವೈಭವ್ ಸೂರ್ಯವಂಶಿ ಸಾಧಿಸಿ ತೋರಿಸಿದ್ದಾರೆ. ಅಂದರೆ ಅಂಡರ್-19 ಏಕದಿನ ಕ್ರಿಕೆಟ್ನಲ್ಲಿ 28 ಪಂದ್ಯಗಳನ್ನಾಡಿದ್ದ ವಿರಾಟ್ ಕೊಹ್ಲಿ ಕಲೆಹಾಕಿದ್ದು 978 ರನ್ಗಳು ಮಾತ್ರ.

ಇದೀಗ ಕೇವಲ 20 ಪಂದ್ಯಗಳ ಮೂಲಕ ವೈಭವ್ ಸೂರ್ಯವಂಶಿ 1026 ರನ್ಗಳಿಸಿದ್ದಾರೆ. ಈ ಮೂಲಕ ಯೂತ್ ಒಡಿಐ ಕ್ರಿಕೆಟ್ನಲ್ಲಿ 1000 ಕ್ಕೂ ಅಧಿಕ ರನ್ಗಳಿಸಿದ ಭಾರತದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ 7ನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವಿಜಯ್ ಝೋಲ್. ಅಂಡರ್ -19 ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 1404 ರನ್ ಗಳಿಸುವ ಮೂಲಕ ಝೊಲ್ ಟೀಮ್ ಇಂಡಿಯಾ ಪರ ಯೂತ್ ಓಡಿಐ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ದಾಖಲೆ ಮುರಿಯಲು ವೈಭವ್ ಸೂರ್ಯವಂಶಿಗೆ ಕೇವಲ 378 ರನ್ಗಳು ಬೇಕಿದೆ. ಹೀಗಾಗಿ ವೈಭವ್ ಕಡೆಯಿಂದ ಮತ್ತೊಂದು ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದು.
