- Kannada News Photo gallery Cricket photos 13 Year Old Vaibhav Creates History: Youngest List A Cricketer in Vijay Hazare Trophy
VHT 2024-25: ವಿಜಯ್ ಹಜಾರೆ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ
Vaibhav Suryavanshi: ಐಪಿಎಲ್‌ನಲ್ಲಿ ಅತಿ ಕಿರಿಯ ಆಟಗಾರನಾಗಿ ದಾಖಲೆ ಬರೆದಿದ್ದ 13 ವರ್ಷದ ವೈಭವ್ ಸೂರ್ಯವಂಶಿ, ಈಗ ಲಿಸ್ಟ್-ಎ ಕ್ರಿಕೆಟ್‌ನಲ್ಲೂ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ಪರ ಆಡುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಲಿಸ್ಟ್-ಎ ಆಟಗಾರನೆನಿಸಿಕೊಂಡಿದ್ದಾರೆ.
Updated on: Dec 22, 2024 | 3:28 PM

ಕಳೆದ ತಿಂಗಳು ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ 1.10 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿ ಅತಿ ಕಿರಿಯ ವಯಸ್ಸಿಗೆ ಐಪಿಎಲ್ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದ 13 ವರ್ಷದ ವೈಭವ್ ಸೂರ್ಯವಂಶಿ ಇದೀಗ ಲಿಸ್ಟ್ ಎ ಕ್ರಿಕೆಟ್‌ನಲ್ಲೂ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ನಿನ್ನೆಯಿಂದ ಆರಂಭವಾಗಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಬಿಹಾರ ತಂಡದ ಪರ ಕಣಕ್ಕಿಳಿಯುವ ಮೂಲಕ ವೈಭವ್ ಈಗ ಲಿಸ್ಟ್-ಎ ಪಂದ್ಯ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿ ಅವರು 13 ವರ್ಷ 269 ದಿನದಲ್ಲಿ ಬಿಹಾರದ ಪರ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು. ಈ ಮೂಲಕ ಅವರು 1999/2000 ದೇಶೀಯ ಸೀಸನ್ನಲ್ಲಿ 14 ವರ್ಷ ಮತ್ತು 51 ದಿನದಲ್ಲಿ ತಮ್ಮ ಲಿಸ್ಟ್-3 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಅಲಿ ಅಕ್ಬರ್‌ನನ್ನು ಹಿಂದಿಕ್ಕಿದ್ದಾರೆ.

ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ ವೈಭವ್ ಸೂರ್ಯವಂಶಿ ಅವರ ಚೊಚ್ಚಲ ಪಂದ್ಯದ ಬಗ್ಗೆ ಹೇಳುವುದಾದರೆ, ಅವರು ಆಡಿದ 2 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟಾದರು. ಇದರ ಜೊತೆಗೆ ಬಿಹಾರ ತಂಡ ತನ್ನ ಮೊದಲ ಪಂದ್ಯದಲ್ಲೇ ಮಧ್ಯಪ್ರದೇಶ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿಹಾರ ತಂಡವು ಕೇವಲ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು 197 ರನ್‌ಗಳ ಗುರಿ ಪಡೆದ ಮಧ್ಯಪ್ರದೇಶ 24.5 ಓವರ್‌ಗಳು ಬಾಕಿ ಇರುವಂತೆಯೇ ಸುಲಭವಾಗಿ ಗೆಲುವಿನ ದಡ ಮುಟ್ಟಿತು. ಮಧ್ಯಪ್ರದೇಶ ಪರ ನಾಯಕ ರಜತ್ ಪಾಟಿದಾರ್ 33 ಎಸೆತಗಳಲ್ಲಿ 55 ರನ್ ಗಳಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹರ್ಷ್ ಗಾವ್ಲಿ 83 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು.
