ವಿಜಯ್ ಹಜಾರೆ ಟೂರ್ನಿಯಲ್ಲಿ ಆಂಧ್ರಪ್ರದೇಶ ತಂಡದ ನಾಯಕ ಶ್ರೀಕರ್ ಭರತ್ ಅಬ್ಬರ ಮುಂದುವರೆದಿದೆ. ಹಿಮಾಚಲ ಪ್ರದೇಶ ತಂಡದ ವಿರುದ್ದ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಭರತ್ ಇದೀಗ ಮತ್ತೊಂದು ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಸೆಂಚುರಿಯೊಂದಿಗೆ ಸಿಡಿಲಬ್ಬರ ಮುಂದುವರೆಸಿದ್ದಾರೆ.
ಗುಜರಾತ್ ವಿರುದ್ದ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಸೋತ ಆಂಧ್ರಪ್ರದೇಶ ಮೊದಲ ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆಂಧ್ರ ಆರಂಭಿಕ ಜ್ಞಾನೇಶ್ವರ್ ಕೇವಲ 1 ರನ್ಗೆ ಔಟಾಗಿದ್ದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭರತ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಒಂದೆಡೆ ಭರತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರೆ ಮತ್ತೊಂದು ವಿಕೆಟ್ ಬೀಳುತ್ತಿದ್ದವು. ಇದಾಗ್ಯೂ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಭರತ್ 138 ಎಸೆತಗಳಲ್ಲಿ 16 ಬೌಂಡರಿ 7 ಸಿಕ್ಸ್ಗಳನ್ನು ಸಿಡಿಸಿ 156 ರನ್ ಕಲೆಹಾಕಿದರು. ಈ ಸ್ಪೋಟಕ ಇನಿಂಗ್ಸ್ ನೆರವಿನಿಂದ ಆಂಧ್ರ ತಂಡವು 50 ಓವರ್ನಲ್ಲಿ 253 ರನ್ ಕಲೆಹಾಕಲು ಸಾಧ್ಯವಾಯಿತು. ಅಂದರೆ ತಂಡದ ಒಟ್ಟಾರೆ ಮೊತ್ತದ ಅರ್ಧದಷ್ಟು ರನ್ಗಳನ್ನು ಭರತ್ ಒಬ್ಬರೇ ಕಲೆಹಾಕಿದ್ದರು.
ಈ ಹಿಂದಿನ ಪಂದ್ಯದಲ್ಲೂ ಭರತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹಿಮಾಚಲ ವಿರುದ್ದದ ಪಂದ್ಯದಲ್ಲಿ 109 ಎಸೆತಗಳಲ್ಲಿ ಅಜೇಯ 161 ರನ್ ಬಾರಿಸಿ ಮಿಂಚಿದ್ದರು. ಇದೀಗ ಮತ್ತೊಮ್ಮೆ 150ಕ್ಕೂ ಅಧಿಕ ರನ್ ಬಾರಿಸುವ ಮೂಲಕ ಸತತ ಎರಡು ಇನಿಂಗ್ಸ್ಗಳಿಂದ 317 ರನ್ ಕಲೆಹಾಕಿದ್ದಾರೆ.
ಸತತ ಸೆಂಚುರಿ ಮೂಲಕ ಗಮನ ಸೆಳೆದಿರುವ ಭರತ್ ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ಆಡುವ ಅವಕಾಶ ದೊರೆತಿರಲಿಲ್ಲ. ಅಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾ ಸರಣಿಯಿಂದ ಕೈಬಿಡಲಾಗಿದೆ. ಇದೀಗ ದೇಶೀಯ ಅಂಗಳದಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸುವ ಮೂಲಕ ರಿಷಭ್ ಪಂತ್, ವೃದ್ಧಿಮಾನ್ ಸಾಹಾ ಪೈಪೋಟಿ ನೀಡಲು ಮುಂದಾಗಿದ್ದಾರೆ.
ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ 8 ಪಂದ್ಯಗಳನ್ನಾಡಿದ್ದ ಭರತ್ 7 ಇನಿಂಗ್ಸ್ಗಳಿಂದ 191 ರನ್ ಕಲೆಹಾಕಿದ್ದರು. ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ. ಇದಾಗ್ಯೂ ಈ ಬಾರಿ ವಿಕೆಟ್ ಕೀಪರ್ ಬ್ಯಾಟರ್ ಭರತ್ ಅವರನ್ನು ಆರ್ಸಿಬಿ ಉಳಿಸಿಕೊಂಡಿಲ್ಲ. ಇದೀಗ ಭರ್ಜರಿ ಫಾರ್ಮ್ ಪ್ರದರ್ಶಿಸುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುತ್ತಿದ್ದಾರೆ ಶ್ರೀಕರ್ ಭರತ್.
Published On - 4:12 pm, Tue, 14 December 21