
ಏಕದಿನ ಕ್ರಿಕೆಟ್ನಲ್ಲಿ ರನ್ ಮಳೆ ಹರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಐಸಿಸಿಯಿಂದಲೂ ಭರ್ಜರಿ ಉಡುಗೊರೆ ಸಿಕ್ಕಿದೆ. ಕಳೆದ ಐದು ಇನ್ನಿಂಗ್ಸ್ಗಳಲ್ಲಿಯೂ 50 ಪ್ಲಸ್ ಇನ್ನಿಂಗ್ಸ್ ಆಡಿರುವ ಕೊಹ್ಲಿ ಇದೀಗ ಏಕದಿನ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ. ಇದು ಖುಷಿಯ ವಿಚಾರವಾದರೆ ಇದರ ಜೊತೆಗೆ ಮತ್ತೊಂದು ಕಹಿಯ ವಿಚಾರವಿದ್ದು, ಇಷ್ಟು ದಿನ ಈ ಮಾದರಿಯಲ್ಲಿ ಅಗ್ರಸ್ಥಾನದಲ್ಲಿದ್ದ ರೋಹಿತ್ ಶರ್ಮಾ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿರಾಟ್ ಕೊಹ್ಲಿ 4 ವರ್ಷ 9 ತಿಂಗಳ ನಂತರ ಮತ್ತೊಮ್ಮೆ ಏಕದಿನ ಕ್ರಿಕೆಟ್ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಂದರೆ 1736 ದಿನಗಳ ದೀರ್ಘ ಕಾಯುವಿಕೆಯ ನಂತರ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಇದಕ್ಕೂ ಮೊದಲು, ವಿರಾಟ್ ಕೊಹ್ಲಿ ಏಪ್ರಿಲ್ 13, 2021 ರವರೆಗೆ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದರು.

ಆದರೆ ಏಪ್ರಿಲ್ 14 ರಂದು ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ನಂಬರ್ ಸ್ಥಾನಕ್ಕೇರುವ ಮೂಲಕ ವಿರಾಟ್ ಕೊಹ್ಲಿಯನ್ನು ಆ ಸ್ಥಾನದಿಂದ ಕೆಳಗಿಳಿಸಿದ್ದರು. ಆದರೀಗ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕ ಮತ್ತು ಅರ್ಧಶತಕ ಬಾರಿಸಿದ್ದ ವಿರಾಟ್, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನದಲ್ಲಿ 93 ರನ್ ಬಾರಿಸಿದ್ದರು. ಈ ಪ್ರದರ್ಶನ ಅವರನ್ನು ನಂಬರ್ 1 ಸ್ಥಾನಕ್ಕೇರಿಸಿದೆ.

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 785 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ 784 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇತ್ತ ರೋಹಿತ್ ಶರ್ಮಾ 775 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಶುಭಮನ್ ಗಿಲ್ ಐದನೇ ಸ್ಥಾನದಲ್ಲಿದ್ದರೆ, ಶ್ರೇಯಸ್ ಅಯ್ಯರ್ 10 ನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ವಿರಾಟ್ ಕೊಹ್ಲಿ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿರಬಹುದು. ಆದರೆ ಅವರಿಗೆ ಈ ಸ್ಥಾನವನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಬಹುದು. ಏಕೆಂದರೆ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಎರಡನೇ ಸ್ಥಾನದಲ್ಲಿದ್ದು, ಕೊಹ್ಲಿಗಿಂತ ಕೇವಲ ಒಂದು ರೇಟಿಂಗ್ ಪಾಯಿಂಟ್ ಹಿಂದಿದ್ದಾರೆ.

ಹೀಗಾಗಿ ಮುಂದಿನ ವಾರದ ಶ್ರೇಯಾಂಕವನ್ನು ಇಬ್ಬರೂ ಆಟಗಾರರು ಉಳಿದ ಎರಡು ಏಕದಿನ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ. ಮಿಚೆಲ್ ಅವರನ್ನು ಹಿಂದಿಕ್ಕಲು ವಿರಾಟ್ ಸ್ಥಿರವಾಗಿ ರನ್ ಗಳಿಸಬೇಕಾಗುತ್ತದೆ.
Published On - 3:21 pm, Wed, 14 January 26