- Kannada News Photo gallery Cricket photos Virat Kohli breaks Sachin Tendulkar's record in South Africa
Virat Kohli: ವಿರಾಟ್ ಕೊಹ್ಲಿ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್
Virat Kohli Records: ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 38 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಬಿರುಸಿನ 76 ರನ್ ಚಚ್ಚಿದ್ದರು. ಈ ರನ್ಗಳೊಂದಿಗೆ ಸೌತ್ ಆಫ್ರಿಕಾದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಪಾಲಾಗಿದೆ.
Updated on: Dec 30, 2023 | 2:30 PM

ಸೆಂಚುರಿಯನ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 114 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 38 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಬಿರುಸಿನ 76 ರನ್ ಚಚ್ಚಿದ್ದರು. ಈ ರನ್ಗಳೊಂದಿಗೆ ಸೌತ್ ಆಫ್ರಿಕಾದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ಸೌತ್ ಆಫ್ರಿಕಾದಲ್ಲಿ ಆಡಿದ 38 ಪಂದ್ಯಗಳಲ್ಲಿ 6 ಶತಕದೊಂದಿಗೆ ಒಟ್ಟು 1724 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಕಿಂಗ್ ಕೊಹ್ಲಿ ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಇದುವರೆಗೆ ಸೌತ್ ಆಫ್ರಿಕಾದಲ್ಲಿ ಒಟ್ಟು 29 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 5 ಶತಕಗಳೊಂದಿಗೆ ಒಟ್ಟು 1750* ರನ್ ಕಲೆಹಾಕಿದ್ದಾರೆ. ಈ ಮೂಲಕ ಹರಿಣರ ನಾಡಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಹಾಗೆಯೇ ಈ ಪಂದ್ಯದಲ್ಲಿ ಒಟ್ಟು 114 ರನ್ ಬಾರಿಸುವುದರೊಂದಿಗೆ ವಿರಾಟ್ ಕೊಹ್ಲಿ 2023 ರಲ್ಲಿ 2000+ ರನ್ ಪೂರೈಸಿದ್ದಾರೆ. ಈ ಮೂಲಕ ವರ್ಷವೊಂದರಲ್ಲಿ ಅತೀ ಹೆಚ್ಚು ಬಾರಿ 2 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಈ ದಾಖಲೆ ಶ್ರೀಲಂಕಾದ ಕುಮಾರ್ ಸಂಗಾಕ್ಕರ ಹೆಸರಿನಲ್ಲಿತ್ತು. ಸಂಗಾಕ್ಕರ ವರ್ಷವೊಂದರಲ್ಲಿ ಒಟ್ಟು 6 ಬಾರಿ 2 ಸಾವಿರಕ್ಕೂ ಅಧಿಕ ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಕಿಂಗ್ ಕೊಹ್ಲಿ 7ನೇ ಬಾರಿ ವರ್ಷವೊಂದರಲ್ಲಿ 2 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ವರ್ಷವೊಂದರಲ್ಲಿ 7 ಬಾರಿ 2000+ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.



















