
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮುನ್ನಡೆಸುವವರು ಯಾರು? ಈ ಕುತೂಹಲಕಾರಿ ಪ್ರಶ್ನೆಗೆ ಇನ್ನೂ ಸಹ ಉತ್ತರ ಸಿಕ್ಕಿಲ್ಲ. ಆದರೆ ಈ ಬಾರಿ ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿಯೇ ಮುನ್ನಡೆಸಲಿದ್ದಾರೆ ಎಂಬ ಮಹತ್ವದ ಸುಳಿವು ನೀಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ.

ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಸುರೇಶ್ ರೈನಾ ಕಾಮೆಂಟರಿ ಬಾಕ್ಸ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮಾತುಕತೆ ನಡೆಸುತ್ತಿರುವುದನ್ನು ವರ್ಣಿಸುತ್ತಾ ರೈನಾ, ಇಂಗ್ಲೆಂಡ್ ಆಟಗಾರ ಆರ್ಸಿಬಿ ತಂಡದ ನಾಯಕನೊಂದಿಗೆ ಕುಶಲೋಪರಿ ನಡೆಸುತ್ತಿದ್ದಾರೆ ಎಂದಿದ್ದಾರೆ.

ಇತ್ತ ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಅವರಿಗೆ ಆರ್ಸಿಬಿ ತಂಡದ ಮುಂದಿನ ನಾಯಕ ಯಾರೆಂಬುದು ಗೊತ್ತಿದೆ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಎಂದು ಸುರೇಶ್ ರೈನಾ ಬಹಿರಂಗವಾಗಿ ಹೇಳಿದ್ದಾರೆ.

ರೈನಾ ನೀಡಿರುವ ಸುಳಿವಿನಂತೆ ಐಪಿಎಲ್ 2025 ರಲ್ಲಿ ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುವುದು ಬಹುತೇಕ ಖಚಿತ. ಈ ಮೂಲಕ ಕಿಂಗ್ ಕೊಹ್ಲಿ 2021ರ ಬಳಿಕ ಮತ್ತೊಮ್ಮೆ ರಾಯಲ್ ಪಡೆಯ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನ ಅವರು ಆರ್ಸಿಬಿ ತಂಡವನ್ನು 9 ವರ್ಷಗಳ ಕಾಲ ಮುನ್ನಡೆಸಿದ್ದರು.

RCB ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಅಲ್ಲದೆ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್ಸಿಬಿ 2016 ರಲ್ಲಿ ಫೈನಲ್ಗೆ ಪ್ರವೇಶಿಸಿದರೆ, 3 ಬಾರಿ ಪ್ಲೇಆಫ್ಸ್ ಆಡಿತ್ತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಿಂಗ್ ಕೊಹ್ಲಿಗೆ ಮತ್ತೆ ನಾಯಕನ ಪಟ್ಟ ನೀಡುವುದರಲ್ಲಿ ಡೌಟೇ ಇಲ್ಲ ಎನ್ನಬಹುದು.
Published On - 7:54 am, Tue, 11 February 25