- Kannada News Photo gallery Cricket photos IPL 2025: Torrent Group set to buy majority stake in Gujarat Titans
IPL 2025: 5625 ಕೋಟಿ ರೂ. ಮೌಲ್ಯದ ಐಪಿಎಲ್ ತಂಡ ಮಾರಾಟಕ್ಕೆ..!
2021 ರಲ್ಲಿ ನಡೆದ ಐಪಿಎಲ್ ಹೊಸ ಫ್ರಾಂಚೈಸಿಗಳ ಬಿಡ್ಡಿಂಗ್ನಲ್ಲಿ ಟೊರೆಂಟ್ ಗ್ರೂಪ್ ಕೂಡ ಕಾಣಿಸಿಕೊಂಡಿದ್ದರು. ಅಹಮದಾಬಾದ್ ಹಾಗೂ ಲಕ್ನೋ ಫ್ರಾಂಚೈಸಿಗಳಿಗಾಗಿ ಈ ಕಂಪೆನಿಯು ಬಿಡ್ ಸಲ್ಲಿಸಿತ್ತು. ಆದರೆ ದಾಖಲೆಯ ಮೊತ್ತ ಪಾವತಿಸುವ ಮೂಲಕ ಅಹಮದಾಬಾದ್ ಫ್ರಾಂಚೈಸಿಯನ್ನು ಸಿವಿಸಿ ಗ್ರೂಪ್ ತನ್ನದಾಗಿಸಿಕೊಂಡರೆ, ಲಕ್ನೋ ಫ್ರಾಂಚೈಸಿಯನ್ನು ಆರ್ಪಿಎಸ್ಜಿ ಗ್ರೂಪ್ ಖರೀದಿಸಿತ್ತು.
Updated on: Feb 11, 2025 | 11:54 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಆರಂಭಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ತಂಡದ ಮಾಲೀಕರು ಬದಲಾಗುವ ಸಾಧ್ಯತೆಯಿದೆ. ಏಕೆಂದರೆ ಈ ತಂಡದ ಸ್ಟೇಕ್ ಮಾರಾಟಾಗಿದ್ದು, ಇದನ್ನು ಖರೀದಿಸಲು ಅಹಮದಾಬಾದ್ ಮೂಲದ ಟೊರೆಂಟ್ ಗ್ರೂಪ್ ಮುಂದಾಗಿದೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಟೊರೆಂಟ್ ಗ್ರೂಪ್ ಮಾಲೀಕತ್ವದ ಗುಜರಾತ್ ಟೈಟಾನ್ಸ್ ತಂಡ ಕಣಕ್ಕಿಳಿಯಬಹುದು.

ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಮಾಹಿತಿ ಪ್ರಕಾರ, ಟೊರೆಂಟ್ ಗ್ರೂಪ್ ಐಪಿಎಲ್ ತಂಡದ ಪಾಲು ಖರೀದಿಸಲು ಆಸಕ್ತಿ ವಹಿಸಿದೆ. ಗುಜರಾತ್ ಟೈಟಾನ್ಸ್ ತಂಡದ ಮಾಲೀಕರಾದ ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್‌ನರ್ಸ್ ಜತೆ ಈಗಾಗಲೇ ಮಾತುಕತೆ ನಡೆದಿದ್ದು, ಶೇಕಡಾ 67 ರಷ್ಟು ಪಾಲನ್ನು ಖರೀದಿಸಲು ಟೊರೆಂಟ್ ಗ್ರೂಪ್ ಮುಂದಾಗಿದೆ ಎಂದು ವರದಿಯಾಗಿದೆ.

2021 ರಲ್ಲಿ ರೂಪುಗೊಂಡ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯನ್ನು ಅಂದು ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್‌ನರ್ಸ್ ಬರೋಬ್ಬರಿ 5625 ಕೋಟಿ ರೂ. ಬಿಡ್ ಮಾಡಿ ಖರೀದಿಸಿತ್ತು. ಇದೀಗ ಈ ಫ್ರಾಂಚೈಸಿಯ ಬಹುಪಾಲನ್ನು ಮಾರಾಟ ಮಾಡಲು ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್‌ನರ್ಸ್ ಮುಂದಾಗಿದೆ.

ಇದರ ಬೆನ್ನಲ್ಲೇ ಉತ್ತಮಭಾಯಿ ನಥಲಾಲ್ ಮೆಹ್ತಾ ಒಡೆತನ ಟೊರೆಂಟ್ ಗ್ರೂಪ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಬಹುಪಾಲನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಇದಕ್ಕೂ ಮುನ್ನ 2021 ರಲ್ಲಿ ನಡೆದ ಐಪಿಎಲ್ ತಂಡಗಳ ಬಿಡ್ಡಿಂಗ್ನಲ್ಲಿ ಟೊರೆಂಟ್ ಗ್ರೂಪ್ ಕೂಡ ಕಾಣಿಸಿಕೊಂಡಿತ್ತು ಎಂಬುದು ವಿಶೇಷ.

ಗುಜರಾತ್ (ಅಹಮದಾಬಾದ್) ಫ್ರಾಂಚೈಸಿಗಾಗಿ ಟೊರೆಂಟ್ ಗ್ರೂಪ್ 4653 ಕೋಟಿ ರೂ. ಬಿಡ್ ಮಾಡಿತ್ತು. ಇದಾದ ಬಳಿಕ ಲಕ್ನೋ ಫ್ರಾಂಚೈಸಿಗಾಗಿ 4356 ಕೋಟಿ ರೂ. ಬಿಡ್ ಸಲ್ಲಿಸಿತ್ತು. ಆದರೆ ಗುಜರಾತ್ ಫ್ರಾಂಚೈಸಿಯನ್ನು ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್‌ನರ್ಸ್ ಬರೋಬ್ಬರಿ 5625 ಕೋಟಿ ರೂ. ನೀಡಿ ಖರೀದಿಸಿತು. ಹಾಗೆಯೇ ಲಕ್ನೋ ಫ್ರಾಂಚೈಸಿಯನ್ನು 7,090 ರೂ.ಗೆ RPSG ಗ್ರೂಪ್ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಮೂರು ವರ್ಷಗಳ ಬಳಿಕ ಮತ್ತೆ ಐಪಿಎಲ್ ತಂಡದ ಖರೀದಿಗೆ ಟೊರೆಂಟ್ ಗ್ರೂಪ್ ಆಸಕ್ತಿ ತೋರಿಸಿದೆ. ಅದರಂತೆ ಇದೀಗ ಗುಜರಾತ್ ಟೈಟಾನ್ಸ್ ತಂಡದ ಬಹುಪಾಲನ್ನು ಖರೀದಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಎಂಟ್ರಿ ಕೊಡಲು ಅಹಮದಾಬಾದ್ ಮೂಲದ ಕಂಪೆನಿ ಮುಂದಾಗಿದೆ.
























