ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, ಈ ಚಿತ್ರವು ದೀರ್ಘಕಾಲದವರೆಗೆ ನಮ್ಮನ್ನು ಕಾಡಲಿದೆ. ಈ ದುಃಖದ ಸಮಯದಲ್ಲಿ, ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳಬಲ್ಲೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳಿಗೆ ಸೆಹ್ವಾಗ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಬೋರ್ಡಿಂಗ್ನಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತೇನೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.
ಸೆಹ್ವಾಗ್ ಈ ರೀತಿಯಾಗಿ ಮಾನವೀಯತೆ ಮೆರೆಯುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಇಬ್ಬರು ಸೈನಿಕರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಹರಿಯಾಣದ ತಮ್ಮ ಶಾಲೆಯಲ್ಲಿ ಆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರಿಕೆಟ್ ತರಬೇತಿಯನ್ನೂ ಸಹ ನೀಡುತ್ತಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮಕ್ಕಳ ಜೀವನದಲ್ಲಿ ಸಣ್ಣ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾಗಿರುವುದು ಬಹಳ ಸೌಭಾಗ್ಯ. ಅರ್ಪಿತ್ ಸಿಂಗ್ s/o ಶಹೀದ್- ರಾಮ್ ವಕೀಲ್ ಮತ್ತು ರಾಹುಲ್ ಸೊರೆಂಗ್ s/o ಶಹೀದ್- ವಿಜಯ್ ಸೊರೆಂಗ್ ಅವರ ಶಿಕ್ಷಣದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದು ಈ ಹಿಂದೆ ಸೆಹ್ವಾಗ್ ತಿಳಿಸಿದ್ದರು.
ಇದೀಗ ಸೆಹ್ವಾಗ್ ಇಂಟರ್‌ನ್ಯಾಶನಲ್ ಬೋರ್ಡಿಂಗ್ ಸ್ಕೂಲ್ ಮೂಲಕ ರೈಲು ದುರಂತದಲ್ಲಿ ಮೃತಪಟ್ಟವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಸೌಲಭ್ಯ ಕಲ್ಪಿಸುವುದಾಗಿ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ ಅವರ ಈ ಮಾನವೀಯ ನಡೆಗೆ ಇದೀಗ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಮಕ್ಕಳ ಶಿಕ್ಷಣದ ಮೇಲೆ ಟೀಮ್ ಇಂಡಿಯಾ ಮಾಜಿ ಆಟಗಾರನಿಗಿರುವ ಕಾಳಜಿಯನ್ನು ಹಲವರು ಪ್ರಶಂಸಿದ್ದಾರೆ.
ಇನ್ನು ಒಡಿಶಾ ರೈಲು ದುರಂತದಲ್ಲಿ 275 ಮಂದಿ ಸಾವನ್ನಪ್ಪಿದ್ದರೆ, 1,175 ಮಂದಿ ಗಾಯಗೊಂಡಿದ್ದಾರೆ. ಇದು ಭಾರತದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದ್ದು, ಈ ಅಪಘಾತದಲ್ಲಿ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ.
Published On - 11:07 pm, Sun, 4 June 23