Wanindu Hasaranga: ವಿಶ್ವ ದಾಖಲೆ ನಿರ್ಮಿಸಿದ ವನಿಂದು ಹಸರಂಗ..!
ICC World Cup Qualifiers 2023: ಐರ್ಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 325 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಐರ್ಲೆಂಡ್ ತಂಡವು ಹಸರಂಗ ಸ್ಪಿನ್ ದಾಳಿಗೆ ತತ್ತರಿಸಿತು.
Updated on: Jun 25, 2023 | 10:31 PM

ICC World Cup Qualifiers 2023: ಝಿಂಬಾಬ್ವೆಯಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾದ ವನಿಂದು ಹಸರಂಗ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಐರ್ಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 325 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಐರ್ಲೆಂಡ್ ತಂಡವು ಹಸರಂಗ ದಾಳಿಗೆ ತತ್ತರಿಸಿತು.

10 ಓವರ್ ಬೌಲಿಂಗ್ ಮಾಡಿದ್ದ ವನಿಂದು ಹಸರಂಗ 79 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಅತೀ ಹೆಚ್ಚು ಬಾರಿ ಸತತವಾಗಿ 5 ವಿಕೆಟ್ ಕಬಳಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಅದು ಕೂಡ 32 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಅಂದರೆ 1990 ರಲ್ಲಿ ಪಾಕಿಸ್ತಾನ್ ವೇಗಿ ವಾಖರ್ ಯೂನಿಸ್ ಏಕದಿನ ಕ್ರಿಕೆಟ್ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಐದು ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ನ್ಯೂಜಿಲೆಂಡ್ ವಿರುದ್ಧ 11 ರನ್ಗೆ 5 ವಿಕೆಟ್ ಕಬಳಿಸಿದ್ದ ವಾಖರ್, ಆ ಬಳಿಕ ನಡೆದ ವೆಸ್ಟ್ ಇಂಡೀಸ್ ವಿರುದ್ಧದ (5/16, 5/52) ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ 5 ವಿಕೆಟ್ ಉರುಳಿ ಮಿಂಚಿದ್ದರು.

ಇದೀಗ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವನಿಂದು ಹಸರಂಗ ಸತತ ಮೂರು ಬಾರಿ 5 ವಿಕೆಟ್ ಕಬಳಿಸಿದ್ದಾರೆ. ಯುಎಇ (6/24), ಒಮಾನ್ (5/13) ವಿರುದ್ಧ 5 ವಿಕೆಟ್ ಉರುಳಿಸಿದ್ದ ಲಂಕಾ ಸ್ಪಿನ್ನರ್ ಇದೀಗ ಐರ್ಲೆಂಡ್ ವಿರುದ್ಧ ಕೂಡ 5 ವಿಕೆಟ್ಗಳ ಸಾಧನೆ ಮಾಡಿದ್ದಾರೆ.

ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಸತತವಾಗಿ ಮೂರು ಬಾರಿ 5 ವಿಕೆಟ್ ಕಬಳಿಸಿದ ಮೊದಲ ಸ್ಪಿನ್ನರ್ ಎಂಬ ವಿಶ್ವ ದಾಖಲೆಯನ್ನು ವನಿಂದು ಹಸರಂಗ ನಿರ್ಮಿಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 2ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.



















