
T20 World Cup 2026: ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಫೆಬ್ರವರಿ 7 ರಿಂದ ಶುರುವಾಗಲಿರುವ ಈ ಟೂರ್ನಿಯ 27ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಬೇಕಿದೆ. ಆದರೆ ಫೆಬ್ರವರಿ 15 ರಂದು ನಡೆಯಬೇಕಿರುವ ಈ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೇಳಿಕೊಂಡಿದೆ.

ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸುವ ಸಲುವಾಗಿ, ಭಾರತದ ವಿರುದ್ಧ ಕಣಕ್ಕಿಳಿಯದಿರಲು ಪಾಕಿಸ್ತಾನ್ ನಿರ್ಧರಿಸಿದೆ. ಅತ್ತ ಪಾಕಿಸ್ತಾನ್ ತಂಡ ಕಣಕ್ಕಿಳಿಯದಿದ್ದರೂ, ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿಯಲೇಬೇಕು. ಏಕೆಂದರೆ...

ಐಸಿಸಿ ನಿಯಮದ ಪ್ರಕಾರ, ಒಂದು ತಂಡವು ಟಾಸ್‌ಗೆ ನಿಗದಿತ ಸಮಯದಲ್ಲಿ ಸ್ಥಳದಲ್ಲಿ ಕಾಣಿಸಿಕೊಳ್ಳದಿದ್ದರೆ ಮಾತ್ರ ಆ ಪಂದ್ಯವನ್ನು ಅಧಿಕೃತವಾಗಿ ರದ್ದು ಮಾಡಲಾಗುತ್ತದೆ. ಅದನ್ನು ವಾಕ್ ಓವರ್ ಎಂದು ಪರಿಗಣಿಸಬೇಕಿದ್ದರೆ ಒಂದು ತಂಡದ ನಾಯಕ ಟಾಸ್‌ಗೆ ಆಗಮಿಸಿರಬೇಕು.

ಭಾರತವು ಪಂದ್ಯದ ದಿನದ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಿದರೆ ಮತ್ತು ಪಾಕಿಸ್ತಾನ ಹಾಜರಾಗದಿದ್ದರೆ ಮಾತ್ರ ಪಂದ್ಯದ ರೆಫರಿ ಭಾರತಕ್ಕೆ ಔಪಚಾರಿಕವಾಗಿ ವಾಕ್‌ಓವರ್ ನೀಡುತ್ತಾರೆ. ಇದರಿಂದ ಟಾಸ್‌ಗೆ ಆಗಮಿಸಿದ ತಂಡಕ್ಕೆ ಸಂಪೂರ್ಣ 2 ಅಂಕಗಳು ಸಿಗಲಿದೆ. ಹೀಗಾಗಿ ಪಾಕಿಸ್ತಾನ್ ಕಣಕ್ಕಿಳಿಯದಿದ್ದರೂ ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿಯಲೇಬೇಕು.

ಅದರಂತೆ ಫೆಬ್ರವರಿ 15 ರಂದು ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳುವುದು ಖಚಿತ. ಅತ್ತ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಟಾಸ್‌ಗೆ ಆಗಮಿಸದೇ ಇದ್ದರೆ ವಾಕ್ ಓವರ್ನೊಂದಿಗೆ ಟೀಮ್ ಇಂಡಿಯಾ 2 ಅಂಕಗಳನ್ನು ಪಡೆಯಲಿದೆ.