ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಕನಸು ಕೊನೆಗೂ ಈಡೇರಿದೆ. ಕಳೆದ 17 ಸೀಸನ್ಗಳಿಂದ ಮರೀಚಿಕೆಯಾಗಿದ್ದ ಚಾಂಪಿಯನ್ ಪಟ್ಟ ಕೊನೆಗೂ ಆರ್ಸಿಬಿಗೆ ಒಲಿದಿದೆ. ಅದು ಕೂಡ ಮಹಿಳಾ ತಂಡದ ಮೂಲಕ ಎಂಬುದು ವಿಶೇಷ. ಅಂದರೆ ಆರ್ಸಿಬಿ ಫ್ರಾಂಚೈಸಿ ಇದೇ ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
2008 ರಲ್ಲಿ ಅಂಗಳಕ್ಕಿಳಿದ ಆರ್ಸಿಬಿ ಫ್ರಾಂಚೈಸಿಯು ಒಟ್ಟು 17 ಸೀಸನ್ಗಳಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 16 ಸೀಸನ್ ಆಡಿದ್ರೆ, ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 1 ಸೀಸನ್ ಆಡಿತ್ತು. ಆದರೆ ಈ ಹದಿನೇಳು ಸೀಸನ್ಗಳಲ್ಲಿ ಒಮ್ಮೆಯೂ ಟ್ರೋಫಿ ಮುಡಿಗೇರಿಸಿಕೊಂಡಿರಲಿಲ್ಲ.
ಆದರೀಗ ಆರ್ಸಿಬಿ ಫ್ರಾಂಚೈಸಿಯ 18ನೇ ಸೀಸನ್ನಲ್ಲಿ ಮಹಿಳಾ ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬರೋಬ್ಬರಿ 16 ವರ್ಷಗಳ ಬಳಿಕ ಆರ್ಸಿಬಿ ಫ್ರಾಂಚೈಸಿ ತನ್ನ ಪ್ರಶಸ್ತಿ ಖಾತೆಯನ್ನು ತೆರೆದಿದೆ.
ಇದಕ್ಕೂ ಮುನ್ನ ಆರ್ಸಿಬಿ ಪುರುಷರ ತಂಡವು ಐಪಿಎಲ್ 2009 ರಲ್ಲಿ ಮೊದಲ ಬಾರಿ ಫೈನಲ್ಗೆ ಪ್ರವೇಶಿಸಿ ಸೋಲನುಭವಿಸಿತ್ತು. ಇದಾದ ಬಳಿಕ 2011 ಮತ್ತು 2016 ರಲ್ಲಿ ಐಪಿಎಲ್ ಫೈನಲ್ ಆಡಿದ್ದರೂ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿತ್ತು. ಇದರ ನಡುವೆ 2011 ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲೂ ಸೋಲನುಭವಿಸಿತು.
ಮತ್ತೊಂದೆಡೆ 2023 ರಲ್ಲಿ ಕಣಕ್ಕಿಳಿದ ಆರ್ಸಿಬಿ ಮಹಿಳಾ ತಂಡವು ಚೊಚ್ಚಲ ಟೂರ್ನಿಯಲ್ಲೇ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಸಾಂಘಿಕ ಪ್ರದರ್ಶನದೊಂದಿಗೆ ಗಮನ ಸೆಳೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಈ ಮೂಲಕ ಆರ್ಸಿಬಿ ಅಭಿಮಾನಿಗಳ ಬಹುದಿನಗಳ ಕಪ್ ಗೆಲ್ಲುವ ಆಸೆಯನ್ನು ಸ್ಮೃತಿ ಮಂಧಾನ ಪಡೆ ಈಡೇರಿಸಿದೆ. ಇನ್ನು ಉಳಿದಿರುವುದು ವಿರಾಟ್ ಕೊಹ್ಲಿ ಬಳಗದ ಕಪ್ ಗೆಲ್ಲುವ ಕನಸು. ಈ ಕನಸು ಈ ಬಾರಿಯ ಐಪಿಎಲ್ ಮೂಲಕ ಈಡೇರಲಿದೆಯಾ ಕಾದು ನೋಡಬೇಕಿದೆ.
Published On - 7:23 am, Mon, 18 March 24