Updated on: Jun 07, 2023 | 11:53 PM
WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 3 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ 327 ರನ್ ಪೇರಿಸಿದೆ.
ಅಂದರೆ ಮೊದಲ ದಿನದ ಅಟದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ಗಳು ಮೇಲುಗೈ ಸಾಧಿಸಿದ್ದಾರೆ. ಹೀಗೆ ಆಸೀಸ್ ಆಟಗಾರರು ಪಂದ್ಯದ ಮೇಲೆ ಹಿಡಿತ ಸಾಧಿಸಲು ಮುಖ್ಯ ಕಾರಣ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಯ್ಕೆ ಎಂದಿದ್ದಾರೆ ಮಾಜಿ ಆಟಗಾರ ಸುನಿಲ್ ಗವಾಸ್ಕರ್.
ಏಕೆಂದರೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಏಕೈಕ ಸ್ಪಿನ್ನರ್ಗೆ ಸ್ಥಾನ ನೀಡಲಾಗಿತ್ತು. ಅಂದರೆ ರವೀಂದ್ರ ಜಡೇಜಾ ಅವರನ್ನು ಹೊರತುಪಡಿಸಿದರೆ 2ನೇ ಸ್ಪಿನ್ ಬೌಲರ್ ಆಡುವ ಬಳಗದಲ್ಲಿಲ್ಲ. ಅದರಲ್ಲೂ ಅಶ್ವಿನ್ ಅವರನ್ನು ತಂಡದಿಂದ ಕೈ ಬಿಟ್ಟಿರುವುದೇ ಅಚ್ಚರಿ ಎಂದಿದ್ದಾರೆ ಗವಾಸ್ಕರ್.
ಏಕೆಂದರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಲುಪಲು ಅಶ್ವಿನ್ ಅವರ ಕೊಡುಗೆ ಇದೆ. ಇದಾಗ್ಯೂ ಅವರನ್ನು ಕೈ ಬಿಟ್ಟಿದ್ದಾರೆ. ಇಲ್ಲಿ ಉಮೇಶ್ ಯಾದವ್ ಅವರ ಬದಲಿಗೆ ಅನುಭವಿ ಸ್ಪಿನ್ನರ್ ಅಶ್ವಿನ್ ಅವರಿಗೆ ಚಾನ್ಸ್ ನೀಡಬೇಕಿತ್ತು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಪ್ರಸ್ತುತ ಟೆಸ್ಟ್ ಕ್ರಿಕೆಟ್ನ ನಂಬರ್ 1 ಬೌಲರ್ನನ್ನು ನಿರ್ಣಾಯಕ ಪಂದ್ಯದಿಂದ ಕೈ ಬಿಟ್ಟಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ನಡೆಯ ಬಗ್ಗೆ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಹೊರಗಿಟ್ಟು ಕಣಕ್ಕಿಳಿದ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲಿ ಕೇವಲ 3 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ.
ಇದಾಗ್ಯೂ ದ್ವಿತೀಯ ದಿನದಾಟದಲ್ಲಿ ಭಾರತೀಯ ಬೌಲರ್ಗಳು ಮೇಲುಗೈ ಸಾಧಿಸಲಿದ್ದಾರಾ ಕಾದು ನೋಡಬೇಕಿದೆ.
ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.