- Kannada News Photo gallery Cricket photos WTC Final 2023 Virat Kohli Test Record against Australian pace and spin attack
WTC Final 2023: ಕಿಂಗ್ ಕೊಹ್ಲಿ ಎಂದರೆ ಆಸೀಸ್ ಬೌಲರ್ಗಳಿಗೆ ನಡುಕ! ಯಾಕೆ ಗೊತ್ತಾ?
WTC Final 2023: ಆಸೀಸ್ ತಂಡದ ವಿರುದ್ಧ ಕೊಹ್ಲಿ 8 ಶತಕ ಸಿಡಿಸಿದ್ದು, ಸುಮಾರು ಎರಡು ಸಾವಿರ ರನ್ ಗಳಿಸಿದ್ದಾರೆ.
Updated on: Jun 03, 2023 | 9:52 AM

ಜೂನ್ 7ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಭಾರತ- ಆಸ್ಟ್ರೇಲಿಯಾ ತಂಡಗಳು ಈಗಾಗಲೇ ತಾಲೀಮು ಆರಂಭಿಸಿವೆ. ಉಭಯ ತಂಡಗಳಲ್ಲಿ ಬಲಾಢ್ಯರೇ ತುಂಬಿದ್ದು, ಫೈನಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸತತ ಎರಡನೇ ಬಾರಿಗೆ ಭಾರತ ಫೈನಲ್ಗೆ ಲಗ್ಗೆ ಇಟ್ಟಿದ್ದರೆ, ಕಾಂಗರೂಗಳು ಮೊದಲ ಬಾರಿಗೆ ಫೈನಲ್ ಆಡುತ್ತಿದ್ದಾರೆ. ಹೀಗಾಗಿ ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ಆದರೆ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಬೇಕೆಂದಿರುವ ಕಾಂಗರೂಗಳಿಗೆ ಕಿಂಗ್ ಕೊಹ್ಲಿಯ ಭಯ ಕಾಡಲಾರಂಭಿಸಿದೆ.

ವಾಸ್ತವವಾಗಿ ಆಸೀಸ್ ಪಡೆ ಕಿಂಗ್ ಕೊಹ್ಲಿ ವಿಚಾರದಲ್ಲಿ ಇಷ್ಟೊಂದು ಭಯ ಪಡಲು ಕಾರಣ, ಆಸೀಸ್ ವಿರುದ್ಧ ಕೊಹ್ಲಿಯ ಬ್ಯಾಟಿಂಗ್ ಟ್ರ್ಯಾಕ್ ರೆಕಾರ್ಡ್. ಅಂದಹಾಗೆ, ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಮಾಜಿ ನಾಯಕ ಕೊಹ್ಲಿ ದಾಖಲೆ ಅತ್ಯುತ್ತಮವಾಗಿದೆ. ಈ ತಂಡದ ವಿರುದ್ಧ ಕೊಹ್ಲಿ 8 ಶತಕ ಸಿಡಿಸಿದ್ದು, ಸುಮಾರು ಎರಡು ಸಾವಿರ ರನ್ ಗಳಿಸಿದ್ದಾರೆ. ಇದರ ಹೊರತಾಗಿಯೂ, ಕೊಹ್ಲಿ ನಾಯಕ ಪ್ಯಾಟ್ ಕಮಿನ್ಸ್ ವಿರುದ್ಧ ಕೊಂಚ ತಿಣುಕಾಡಿರುವುದನ್ನು ಬಿಟ್ಟರೆ, ಇತರರ ಎದುರು ಅಬ್ಬರಿಸಿದ್ದಾರೆ.

ಇನ್ನು ಆಸೀಸ್ ವೇಗಿಗಳ ವಿರುದ್ಧ ಕೊಹ್ಲಿ ಬ್ಯಾಟ್ ಯಾವ ರೀತಿ ಸದ್ದು ಮಾಡಿದ ಎಂಬುದನ್ನು ನೋಡುವುದಾದರೆ.. ಕೊಹ್ಲಿ ಇಲ್ಲಿಯವರೆಗೆ ಟೆಸ್ಟ್‌ನಲ್ಲಿ ಕಮಿನ್ಸ್ ವಿರುದ್ಧ ಕೇವಲ 82 ರನ್ ಸಿಡಿಸಿದ್ದಾರೆ. ಆದರೆ ಆಸೀಸ್ ನಾಯಕ, ಕಿಂಗ್ ಕೊಹ್ಲಿಯನ್ನು 5 ಬಾರಿ ಬೇಟೆಯಾಡಿದ್ದಾರೆ. ಅಂದರೆ, ಕಮಿನ್ಸ್ ವಿರುದ್ಧ ಕೊಹ್ಲಿ ಕೇವಲ 16ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಪ್ಯಾಟ್ ಕಮ್ಮಿನ್ಸ್ ಅವರನ್ನು ಬಿಟ್ಟರೆ, ಆಸ್ಟ್ರೇಲಿಯಾದ ಇತರ 3 ಪ್ರಮುಖ ಬೌಲರ್‌ಗಳ ವಿರುದ್ಧ, ಕೊಹ್ಲಿಯ ಬ್ಯಾಟ್ ಸಾಕಷ್ಟು ರನ್ ಮಳೆ ಸುರಿಸಿದೆ. ಆಸೀಸ್ ಮತ್ತೊಬ್ಬ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ವಿರುದ್ಧ ಕೊಹ್ಲಿ 73 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಅಂದರೆ ಸ್ಟಾರ್ಕ್ ಬೌಲಿಂಗ್ನಲ್ಲಿ ಕೊಹ್ಲಿ 211 ರನ್ ಕಲೆ ಹಾಕಿದ್ದು, 3 ಬಾರಿ ಮಾತ್ರ ವಿಕೆಟ್ ಒಪ್ಪಿಸಿದ್ದಾರೆ.

ಹಾಗೆಯೇ ಆರ್ಸಿಬಿ ತಂಡದಲ್ಲಿ ಆಡುತ್ತಿರುವ ಜೋಶ್ ಹ್ಯಾಜಲ್‌ವುಡ್ ವಿರುದ್ಧವೂ ಉತ್ತಮವಾಗಿ ಬ್ಯಾಟ್ ಬೀಸಿರುವ ಕೊಹ್ಲಿ 167 ರನ್ ಕಲೆ ಹಾಕಿದ್ದು, 3 ಬಾರಿ ಮಾತ್ರ ಹ್ಯಾಜಲ್ವುಡ್ಗೆ ತಮ್ಮ ವಿಕೆಟ್ ನೀಡಿದ್ದಾರೆ.

ಇನ್ನು ಸ್ಪಿನ್ನರ್ಗಳ ವಿಚಾರಕ್ಕೆ ಬಂದರೆ, ಕೊಹ್ಲಿ ಇಲ್ಲಿ ಕೊಂಚ ಎಡವಿರುವುದನ್ನು ಕಾಣಬಹುದಾಗಿದೆ. ಅನುಭವಿ ಆಫ್ ಸ್ಪಿನ್ನರ್ ನಾಥನ್ ಲಿಯಾನ್ಗೆ ಅತ್ಯಧಿಕ ಬಾರಿ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರಾದರೂ, ರನ್ ಕಲೆ ಹಾಕುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಆಸೀಸ್ ಪರ 450ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಲಿಯಾನ್ 7 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ಆದರೆ ಇದೇ ಲಿಯಾನ್ ವಿರುದ್ಧ 73ರ ಸರಾಸರಿಯಲ್ಲಿ ಕೊಹ್ಲಿ ಒಟ್ಟು 511 ರನ್ ಕಲೆಹಾಕಿದ್ದಾರೆ.




