Updated on: Feb 19, 2023 | 8:32 PM
WTC Point Table: ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲೂ ಟೀಮ್ ಇಂಡಿಯಾದ ಗೆಲುವಿನ ಸರಾಸರಿಯಲ್ಲಿ ಏರಿಕೆ ಕಂಡಿದೆ.
ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ. ಇಲ್ಲಿ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದೆ.
ಇನ್ನು ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡಕ್ಕೂ ಫೈನಲ್ ಪ್ರವೇಶಿಸುವ ಅವಕಾಶವಿದೆ. ಆದರೀಗ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಒಂದು ವೇಳೆ ಇಂದೋರ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಎಂಟ್ರಿ ಕೊಡಲಿದೆ.
ಇತ್ತ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿದರೆ ಶ್ರೀಲಂಕಾ ತಂಡದ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಅಂದರೆ ಟೀಮ್ ಇಂಡಿಯಾ ಆಸೀಸ್ ವಿರುದ್ಧ ಟೆಸ್ಟ್ ಸರಣಿಯನ್ನು 4-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದರೆ, ಶ್ರೀಲಂಕಾ ತಂಡಕ್ಕೆ ಫೈನಲ್ಗೇರುವ ಅವಕಾಶ ಹೆಚ್ಚಾಗಲಿದೆ.
ಅದರಂತೆ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ 2-0 ಅಂತರದಿಂದ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಬಹುದು. ಹೀಗಾಗಿ ಭಾರತದ ವಿರುದ್ಧ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲಲು ಆಸೀಸ್ ಪಡೆ ಇನ್ನಿಲ್ಲದ ಪ್ರಯತ್ನ ಮಾಡಲಿದೆ.
ಇನ್ನು ಭಾರತ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ 1 ರಲ್ಲಿ ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಬಹುದು. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 3-0 ಅಥವಾ 3-1 ಅಂತರದಿಂದ ಸರಣಿ ಗೆದ್ದರೂ ಕೂಡ ಡಬ್ಲ್ಯೂಟಿಸಿ ಫೈನಲ್ಗೆ ಎಂಟ್ರಿ ಕೊಡಲಿದೆ. ಸದ್ಯ 2-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಹೊಂದಿರುವ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಲು ಕೇವಲ 1 ಗೆಲುವಿನ ಅವಶ್ಯಕತೆಯಿದೆ.
ಅದರಂತೆ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಪಾಯಿಂಟ್ ಟೇಬಲ್ ಹೀಗಿದ್ದು, ಇಲ್ಲಿ ಗೆಲುವು ಶೇಕಡಾವಾರು ಮೂಲಕ ತಂಡಗಳ ಸ್ಥಾನ ನಿರ್ಧರಿಸಲಾಗುತ್ತದೆ. ಅಂದರೆ ಪ್ರಸ್ತುತ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವು 66.67 ಗೆಲುವಿನ ಶೇಕಡಾವಾರು ಹೊಂದಿದ್ದರೆ, ಟೀಮ್ ಇಂಡಿಯಾ 64.06 ಗೆಲುವಿನ ಶೇಕಡಾವಾರು ಹೊಂದಿದೆ. ಇಲ್ಲಿ ಭಾರತ-ಆಸ್ಟ್ರೇಲಿಯಾ ನಡುವಣ ಗೆಲುವಿನ ಪರ್ಸಂಟೇಜ್ ವ್ಯತ್ಯಾಸ ಕೇವಲ 2.61 ಮಾತ್ರ. ಹೀಗಾಗಿ ಮುಂಬರುವ ಪಂದ್ಯಗಳ ಮೂಲಕ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸುವ ಅವಕಾಶವಿದೆ.
IND vs AUS