ಬರೋಬ್ಬರಿ 106 ಟೆಸ್ಟ್ ಪಂದ್ಯಗಳು...ಅದರಲ್ಲಿ 180 ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಔಟಾಗಿದ್ದಾರೆ. ಅದು ಕೂಡ ತಮ್ಮದೇ ತಪ್ಪಿನಿಂದಾಗಿ ಎಂಬುದೇ ವಿಶೇಷ.
ಹೌದು, ದೆಹಲಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್ನಲ್ಲಿ 44 ರನ್ ಬಾರಿಸಿ ಎಲ್ಬಿಡಬ್ಲ್ಯೂ ಆಗಿ ಔಟಾಗಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಕಿಂಗ್ ಕೊಹ್ಲಿ 20 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ಕೊಹ್ಲಿ ಔಟ್ ಆಗಿದ್ದು ಸ್ಟಂಪಿಂಗ್ನಿಂದಾಗಿ ಎಂಬುದೇ ಇಲ್ಲಿ ವಿಶೇಷ. ಅಂದರೆ 179 ಟೆಸ್ಟ್ ಇನಿಂಗ್ಸ್ ಆಡಿದ್ದ ಕೊಹ್ಲಿ ಒಮ್ಮೆಯೂ ಸ್ಟಂಪ್ ಔಟ್ ಆಗಿರಲಿಲ್ಲ. ಆದರೆ 2ನೇ ಇನಿಂಗ್ಸ್ನ 19ನೇ ಓವರ್ನ 2ನೇ ಎಸೆತವನ್ನು ಕೊಹ್ಲಿ ಮುಂದೆ ಬಂದು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ್ದರು.
ಆದರೆ ಮರ್ಫಿ ಎಸೆದ ಚೆಂಡು ವಿರಾಟ್ ಕೊಹ್ಲಿಯನ್ನು ವಂಚಿಸಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು. ಕ್ಷಣಾರ್ಧದಲ್ಲೇ ವಿಕೆಟ್ ಬೇಲ್ಸ್ ಎಗರಿಸುವ ಮೂಲಕ ಅಲೆಕ್ಸ್ ಕ್ಯಾರಿ ಕೊಹ್ಲಿಯನ್ನು ಸ್ಟಂಪ್ ಔಟ್ ಮಾಡಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಸ್ಟಂಪ್ ಔಟ್ ಆಗಿ ನಿರ್ಗಮಿಸಬೇಕಾಯಿತು. ಅತ್ತ ಕೊಹ್ಲಿಯನ್ನು ಟೆಸ್ಟ್ನಲ್ಲಿ ಸ್ಟಂಪ್ ಔಟ್ ಮಾಡಿದ ಮೊದಲ ಕೀಪರ್ ಎಂಬ ಹೆಗ್ಗಳಿಕೆಯು ಅಲೆಕ್ಸ್ ಕ್ಯಾರಿ ಪಾಲಾಯಿತು.
ಇನ್ನು ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 263 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 262 ರನ್ ಪೇರಿಸಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು ಕೇವಲ 113 ರನ್ಗಳಿಗೆ ಆಲೌಟ್ ಆಯಿತು.
ಅದರಂತೆ ಸುಲಭ ಗುರಿ ಪಡೆದ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 118 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 4 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.
Published On - 9:30 pm, Sun, 19 February 23