ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಸೋಲು ಅನುಭವಿಸಬೇಕಾಯಿತು. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1 ಹಿನ್ನಡೆಯಲ್ಲಿದೆ. ಇದಲ್ಲದೆ ಈ ಟೆಸ್ಟ್ ಪಂದ್ಯದ ಸೋಲು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲು ಸಾಕಷ್ಟು ನಷ್ಟವನ್ನುಂಟು ಮಾಡಿದೆ.
ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಸೋಲು ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಸ್ಥಾನವನ್ನು ಬದಲಾಯಿಸದಿದ್ದರೂ, ಅದರ ಗೆಲುವಿನ ಶೇಕಡಾವಾರುವಿನಲ್ಲಿ ನಷ್ಟವನ್ನುಂಟು ಮಾಡಿದೆ. ಈ ಪಂದ್ಯಕ್ಕೂ ಮುನ್ನ ತಂಡ 74.24 ರಷ್ಟು ಗೆಲುವಿನ ಶೇಕಡಾವಾರುವಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಈಗ ತಂಡದ ಗೆಲುವಿನ ಶೇಕಡಾವಾರು 68.06 ಕ್ಕೆ ಇಳಿದಿದೆ.
ಈ ಸೋಲಿನೊಂದಿಗೆ ಭಾರತಕ್ಕೆ ಡಬ್ಲ್ಯುಟಿಸಿ ಫೈನಲ್ ತಲುಪುವ ಹಾದಿಯು ಖಂಡಿತವಾಗಿಯೂ ಸ್ವಲ್ಪ ಕಷ್ಟಕರವಾಗಿದೆ. ಆದರೆ ಭಾರತಕ್ಕೆ ಪುನರಾಗಮನ ಮಾಡಲು ಇನ್ನೂ ಅವಕಾಶವಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಇನ್ನೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಅದರ ನಂತರ ಮುಂದಿನ ತಿಂಗಳಿನಿಂದ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ.
ಅಂದರೆ ರೋಹಿತ್ ಪಡೆ ಇನ್ನೂ ಏಳು ಪಂದ್ಯಗಳನ್ನು ಆಡಬೇಕಾಗಿದೆ. ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಟೀಂ ಇಂಡಿಯಾ ಉಳಿಯಬೇಕಾದರೆ ಉಳಿದಿರುವ ಈ 7 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ನ್ಯೂಜಿಲೆಂಡ್ ವಿರುದ್ಧದ ಉಳಿದ ಎರಡು ಪಂದ್ಯಗಳನ್ನು ಮತ್ತು ಆಸ್ಟ್ರೇಲಿಯ ಪ್ರವಾಸದಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, ಮುಂದಿನ ವರ್ಷ ನಡೆಯಲಿರುವ ಡಬ್ಲ್ಯುಟಿಸಿಯ ಫೈನಲ್‌ಗೆ ಲಗ್ಗೆ ಇಡಲಿದೆ.
ಇತ್ತ ಬೆಂಗಳೂರಿನಲ್ಲಿ ಭಾರತವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಭಾರಿ ಲಾಭ ಗಳಿಸಿ ನೇರವಾಗಿ ನಾಲ್ಕನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ, ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ ಇದೀಗ ಐದನೇ ಸ್ಥಾನಕ್ಕೆ ಕುಸಿದಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಂತರ, ಶ್ರೀಲಂಕಾ ತಂಡವು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಅದರ ಗೆಲುವಿನ ಶೇಕಡಾವಾರು 55.56 ಆಗಿದೆ.
ಉಳಿದಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದ್ದು, ಅದರ ಗೆಲುವಿನ ಶೇಕಡಾವಾರು 18.52 ಆಗಿದೆ. ಪಾಕ್ ತಂಡಕ್ಕಿಂತ ಮೇಲಿರುವ ಬಾಂಗ್ಲಾದೇಶ ತಂಡ 7ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ತಂಡ 8ನೇ ಸ್ಥಾನದಲ್ಲಿದೆ. ಈ ಎರಡು ತಂಡಗಳ ಗೆಲುವಿನ ಶೇಕಡಾವಾರು ಕ್ರಮವಾಗಿ 34.38 ಮತ್ತು 38.89 ಆಗಿದೆ.
ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಮತ್ತು ಆಸ್ಟ್ರೇಲಿಯಾ ಪ್ರಮುಖ ಸ್ಪರ್ಧಿಗಳಾಗಿವೆ. ಆದರೆ ಇತ್ತಂಡಗಳ ನಡುವಣ ಪಂದ್ಯಗಳು ಹೆಚ್ಚುತ್ತಿರುವಂತೆಯೇ ಫೈನಲ್‌ನ ಓಟ ಹೆಚ್ಚು ರೋಚಕವಾಗುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ಹೊರತುಪಡಿಸಿ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸಹ ಫೈನಲ್ ಸ್ಥಾನಕ್ಕಾಗಿ ಸ್ಪರ್ಧಿಗಳಾಗಿವೆ.
Published On - 4:15 pm, Sun, 20 October 24