- Kannada News Photo gallery Cricket photos Yashasvi Jaiswal Health Update: Recovering from Gastroenteritis, IPL Return Expected
Yashasvi Jaiswal: ಯಶಸ್ವಿ ಜೈಸ್ವಾಲ್ ಆರೋಗ್ಯ ಹೇಗಿದೆ? ಹೊರಬಿತ್ತು ಬಿಗ್ ಅಪ್ಡೇಟ್
Yashasvi Jaiswal health update: ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ವೇಳೆ ಅನಾರೋಗ್ಯಕ್ಕೀಡಾಗಿದ್ದ ಯಶಸ್ವಿ ಜೈಸ್ವಾಲ್ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ತೀವ್ರ ಗ್ಯಾಸ್ಟ್ರೋಎಂಟರೈಟಿಸ್‌ನಿಂದ ಬಳಲಿದ್ದ ಜೈಸ್ವಾಲ್, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಮೈದಾನಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಸದ್ಯಕ್ಕೆ ಟೆಸ್ಟ್ ಸರಣಿಗಳಿಲ್ಲದ ಕಾರಣ, ಐಪಿಎಲ್ ಮೂಲಕ ಅವರು ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಿದೆ.
Updated on: Dec 19, 2025 | 6:07 PM

ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ವೇಳೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ತಾನು ಚೆನ್ನಾಗಿ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿರುವ ಜೈಸ್ವಾಲ್ ಶೀಘ್ರದಲ್ಲೇ ಮೈದಾನಕ್ಕೆ ಮರಳುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ವಾಸ್ತವವಾಗಿ ಪುಣೆಯಲ್ಲಿ ನಡೆಯುತ್ತಿದ್ದ ಹರಿಯಾಣ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ವೇಳೆ ಜೈಸ್ವಾಲ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ತಪಾಸಣೆಯ ಬಳಿಕ ಜೈಸ್ವಾಲ್ ಅವರಿಗೆ ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ಇರುವುದು ಪತ್ತೆಯಾಯಿತು.

ಹೀಗಾಗಿ ವೈದ್ಯರು ಯಶಸ್ವಿ ಜೈಸ್ವಾಲ್ ಅವರಿಗೆ ಸಂಪೂರ್ಣ ಫಿಟ್ ಆಗುವವರೆಗೆ ಕ್ರಿಕೆಟ್ ಆಡದಂತೆ ಮತ್ತು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಇದೀಗ ತಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದ ಯಶಸ್ವಿ ಜೈಸ್ವಾಲ್, ಆಸ್ಪತ್ರೆಯಲ್ಲಿ ತಮಗೆ ದೊರೆತ ಸೌಲಭ್ಯಗಳು ಮತ್ತು ಚಿಕಿತ್ಸೆಯನ್ನು ಶ್ಲಾಘಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಮತ್ತು ತಮಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಜೈಸ್ವಾಲ್ ಆಡಿದ ಮೂರು ಪಂದ್ಯಗಳಲ್ಲಿ 48.33 ಸರಾಸರಿ ಮತ್ತು 168.6 ಸ್ಟ್ರೈಕ್ ರೇಟ್‌ನಲ್ಲಿ 145 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಮೂರು ಪಂದ್ಯಗಳಲ್ಲಿ 78 ರ ಸರಾಸರಿಯಲ್ಲಿ 156 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು ತಮ್ಮ ಮೊದಲ ಏಕದಿನ ಶತಕವನ್ನೂ ಬಾರಿಸಿದ್ದರು.

ಈ ವರ್ಷ ಟೀಂ ಇಂಡಿಯಾ ಯಾವುದೇ ಟೆಸ್ಟ್ ಸರಣಿಯನ್ನು ಆಡದ ಕಾರಣ ಯಶಸ್ವಿ ಜೈಸ್ವಾಲ್ ಚೇತರಿಕೆಗೆ ಸಾಕಷ್ಟು ಸಮಯ ಸಿಗಲಿದೆ. ಭಾರತ ತಂಡ ಮುಂದಿನ ವರ್ಷ ಆಗಸ್ಟ್ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಆ ಸರಣಿಯೊಂದಿಗೆ ಜೈಸ್ವಾಲ್ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಐಪಿಎಲ್ನಲ್ಲಿ ಮಿಂಚಲಿದ್ದಾರೆ.




