- Kannada News Photo gallery Cricket photos Yuvraj Singh Shares Super Cute Daddy Duties With His Newborn Son
Yuvraj Singh: ಏನೆಲ್ಲಾ ಮಾಡಬೇಕಪ್ಪಾ…ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡ ಯುವಿ
Yuvraj Singh: ತಂದೆಯಾದ ಖುಷಿಯಲ್ಲಿರುವ ಯುವರಾಜ್ ಸಿಂಗ್ ಹಂಚಿಕೊಂಡಿರುವ ಮಗುವಿನ ಫೋಟೋಗಳು ಇದೀಗ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳ ಕಡೆಯಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Updated on:May 09, 2022 | 10:58 PM

ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ಪತ್ನಿ ಹೇಝಲ್ ಕೀಜ್ ಜನವರಿ 26 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. 'ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂದು ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಯುವರಾಜ್ ಸಿಂಗ್ ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದಾಗ್ಯೂ ಯುವಿ ಎಲ್ಲೂ ಕೂಡ ತಮ್ಮ ಮನೆಯ ಯುವರಾಜನ ಫೋಟೋವನ್ನು ಬಹಿರಂಗ ಪಡಿಸಿರಲಿಲ್ಲ.

ಇದೀಗ ಯುವರಾಜ್ ಸಿಂಗ್ ತಮ್ಮ ಪುಟ್ಟ ರಾಜಕುಮಾರನ ಜೊತೆಗಿನ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಅದು ಕೂಡ ಹಾಸ್ಯಪ್ರಜ್ಞೆಯೊಂದಿಗೆ ಎಂಬುದು ವಿಶೇಷ. ಯುವಿ ಮಗುವಿನ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದು, ತಂದೆಯ ಕರ್ತವ್ಯಗಳು ಏನೆಲ್ಲಾ ಇರುತ್ತೆ ಎಂಬ ಲುಕ್ವೊಂದನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ ಮತ್ತೊಂದು ಫೋಟೋದಲ್ಲಿ ಹೆಂಡತಿಯ ಪಾದವನ್ನು ಒತ್ತುತ್ತಾ ಪತ್ನಿ ಸೇವೆಯನ್ನು ಮಾಡುತ್ತಿರುವುದನ್ನು ಕೂಡ ಯುವರಾಜ್ ಸಿಂಗ್ ಬಹಿರಂಗಪಡಿಸಿದ್ದಾರೆ. ಇದರ ಜೊತೆಗೆ ಮಗುವಿನ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಸಹ ಯುವಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇನ್ನು ಅಮ್ಮಂದಿರ ದಿನದಂದು ಹಂಚಿಕೊಂಡ ಫೋಟೋಗೆ ಯುವರಾಜ್ ಸಿಂಗ್ ನೀಡಿರುವ ಕ್ಯಾಪ್ಷನ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ತಾಯಂದಿರ ದಿನದಂದು ತಂದೆಯಾಗಿ ನನ್ನ ಪ್ರಯಾಣವನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ಅಮ್ಮಂದಿರೊಂದಿಗೆ ನಾವು ಮಾಡಬಹುದಾದ ಉತ್ತಮ ಕೆಲಸವೆಂದರೆ ಪೋಷಕರಲ್ಲಿ ಸಮಾನ ಪಾಲುದಾರರಾಗಿರುವುದು. ಅದು ಡೈಪರ್ ಅಥವಾ ಫೀಡಿಂಗ್ ಆಗಿರಲಿ, ನಾನು ಸಹ ಕಲಿಯುತ್ತಿದ್ದೇನೆ ಎಂದು ಯುವಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ತಂದೆಯಾದ ಖುಷಿಯಲ್ಲಿರುವ ಯುವರಾಜ್ ಸಿಂಗ್ ಹಂಚಿಕೊಂಡಿರುವ ಮಗುವಿನ ಫೋಟೋಗಳು ಇದೀಗ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳ ಕಡೆಯಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಅಂದಹಾಗೆ ಯುವರಾಜ್ ಮತ್ತು ಹೇಝಲ್ ಕೀಚ್ ಅವರು 2016ರ ನವೆಂಬರ್ 30ರಂದು ಪಂಜಾಬಿ ಸಾಂಪ್ರದಾಯದಂತೆ ಹಸೆಮಣೆ ಏರಿದ್ದರು. ಹಾಗೆಯೇ ಡಿಸೆಂಬರ್ 2, 2016ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅವರು ಮತ್ತೆ ವೈವಾಹಿಕ ಪ್ರತಿಜ್ಞೆ ವಿಧಿ ವಿಧಾನಗಳನ್ನು ಮುಗಿಸಿದ್ದರು. ಇದೀಗ ಈ ದಂಪತಿಯ ಪ್ರೀತಿಯ ದ್ಯೋತಕವಾಗಿ ಮುದ್ದಾದ ಗಂಡು ಮಗುವಿನ ಆಗಮನವಾಗಿದೆ.
Published On - 10:42 pm, Mon, 9 May 22




