
ನಿನ್ನೆಯ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಆಭರಣ ಭಾಗಗಳ ಮೇಲೆ ಆಮದು ಸಂಕವನ್ನು ಕಡಿಮೆ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಒಡವೆಗಳಿಗೆ ಶೇ. 25ರಷ್ಟು ಆಮದು ಸುಂಕ ವಿಧಿಸಲಾಗುತ್ತಿತ್ತು. ಅದನ್ನು ಶೇ. 20ಕ್ಕೆ ಇಳಿಸಲಾಗಿದೆ. ಇದು ಇವತ್ತಿನಿಂದಲೇ ಜಾರಿಗೆ ಬರುತ್ತಿದೆ. ಇವತ್ತಿನಿಂದ ಒಡವೆ ಭಾಗಗಳ ಮೇಲೆ ಶೇ. 20ರಷ್ಟು ಆಮದು ಸುಂಕ ವಿಧಿಸಲಾಗುತ್ತದೆ. ಇನ್ನು, ಪ್ಲಾಟಿನಂ ಒಡವೆ ಭಾಗಗಳ ಮೇಲಿನ ಆಮದು ಸುಂಕವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಇಳಿಸಲಾಗಿದೆ. ಶೇ. 25ರಷ್ಟಿದ್ದ ಆಮದು ಸುಂಕವನ್ನು ಶೇ. 5ಕ್ಕೆ ಇಳಿಸಲಾಗಿದೆ.

ಒಡವೆ ಮೇಲಿನ ಆಮದು ಸುಂಕವನ್ನು ಇಳಿಸಿರುವ ಕ್ರಮವನ್ನು ಈ ಕ್ಷೇತ್ರದ ಉದ್ಯಮಿಗಳು ಸ್ವಾಗತಿಸಿದ್ದಾರೆ. ‘ಭಾರತದಲ್ಲಿ ಒಡವೆಗಳ ಮಾರಾಟ ಅಧಿಕವಾಗಿದೆ. ಹೀಗಾಗಿ, ಒಡವೆಗೆ ಆಮದು ಸುಂಕ ಇಳಿಸಿರುವುದರಿಂದ ಇವುಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚುತ್ತದೆ. ಅದರಲ್ಲೂ ಲಕ್ಷುರಿ ಒಡವೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಪ್ಲಾಟಿನಂ ಫೈಂಡಿಂಗ್ ಅನ್ನು ಶೇ. 25ರಿಂದ ಶೇ. 5ಕ್ಕೆ ಆಮದು ಸುಂಕ ಇಳಿಸಿರುವುದೂ ಕೂಡ ಇಡೀ ಒಡವೆ ಮತ್ತು ಹರಳುಗಳ ಉದ್ಯಮಕ್ಕೆ ಪುಷ್ಟಿ ಸಿಕ್ಕಂತಾಗಿದೆ,’ ಎಂದು ಕಮ ಜ್ಯೂವಲರಿ ಸಂಸ್ಥೆಯ ಎಂಡಿ ಕಾಲಿನ್ ಶಾ ಹೇಳಿದ್ದಾರೆ.

‘ಮಧ್ಯಮ ವರ್ಗ, ಕೃಷಿ ಕ್ಷೇತ್ರದ ಮೇಲೆ ಈ ಬಜೆಟ್ ಗಮನ ವಹಿಸಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಬೇಡಿಕೆ ಮತ್ತು ಉತ್ಪಾದಕತೆ ಹೆಚ್ಚಬಹುದು. ಮಹಿಳೆ ಮತ್ತು ಯುವಜನರ ಮೇಲೂ ಬಜೆಟ್ ಗಮನ ಕೊಟ್ಟಿದೆ. ಇವೆಲ್ಲವೂ ಕೂಡ ಭಾರತದ ಆರ್ಥಕ ಬೆಳವಣಿಗೆಗೆ ಪುಷ್ಟಿ ಕೊಡಬಹುದು’ ಎಂದು ಸೆಂಕೋ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ಸಿಇಒ ಸುವಂಕರ್ ಸೇನ್ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ, ತಂತ್ರಜ್ಞಾನ ಅಭಿವೃದ್ಧಿ ಸದ್ಯ ಇಂದಿನ ತುರ್ತು ಅಗತ್ಯವಾಗಿದ್ದು, ಅದರ ಮೇಲೆ ಗಮನ ಕೊಟ್ಟರೆ ದೇಶಕ್ಕೆ ಉಜ್ವಲ ಭವಿಷ್ಯದ ಕನಸು ನನಸಾಗಬಹುದು. ಒಟ್ಟಾರೆ ಈ ಬಜೆಟ್ನ ಉದ್ದೇಶ ಸಕಾರಾತ್ಮಕವಾಗಿದೆ ಎಂದು ಸೇನ್ ತಿಳಿಸಿದ್ದಾರೆ.

ನಿನ್ನೆ ಫೆಬ್ರುವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 50 ಲಕ್ಷ ಕೋಟಿ ರೂ ಮೊತ್ತದ ಬಜೆಟ್ನಲ್ಲಿ ಪ್ರಮುಖವಾಗಿ ಗಮನ ಸೆಳೆದ ಕ್ರಮಗಳಲ್ಲಿ ಆದಾಯ ತೆರಿಗೆ ದರಗಳ ಇಳಿಕೆಯೂ ಒಂದು. 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಪಾವತಿ ಅವಶ್ಯಕತೆ ಇಲ್ಲ. ಗರಿಷ್ಠ ತೆರಿಗೆಯಾದ ಶೇ. 30 ದರವು ಈ ಮುಂಚೆ 15 ಲಕ್ಷ ರೂನಿಂದ ಆರಂಭವಾಗುತ್ತಿತ್ತು. ಈಗ 24 ಲಕ್ಷ ರೂ ಆದಾಯದಿಂದ ಈ ಗರಿಷ್ಠ ತೆರಿಗೆ ದರ ಶುರುವಾಗುತ್ತದೆ. ಅಂದರೆ, ತಿಂಗಳಿಗೆ ಎರಡು ಲಕ್ಷ ರೂವರೆಗೆ ಆದಾಯ ಗಳಿಸುತ್ತಿರುವವರಿಗೆ ತೆರಿಗೆ ಹೊರೆ ಕಡಿಮೆ ಆಗಿದೆ. ತಿಂಗಳಿಗೆ ಒಂದು ಲಕ್ಷ ರೂವರೆಗೆ ಆದಾಯ ಪಡೆಯುತ್ತಿರುವವರೂ ಕೂಡ ಯಾವ ತೆರಿಗೆ ಇಲ್ಲದೇ ನಿಶ್ಚಿಂತೆಯಿಂದ ಇರಬಹುದು.