- Kannada News Photo gallery Delhi Like Vijayanagar Palika Bazar To Be inagurated Aug 25th, vijayanagar main road partially closed, Kannada news
ಪಾಲಿಕೆ ಬಜಾರ್ ಉದ್ಘಾಟನೆ: ವಿಜಯನಗರ ಮುಖ್ಯ ರಸ್ತೆಯಲ್ಲಿ ಸಂಚಾರ ನಿರ್ಬಂಧ
ಬೆಂಗಳೂರು, ಆಗಸ್ಟ್ 24: ದಕ್ಷಿಣ ಭಾರತದ ಮೊಟ್ಟ ಮೊದಲ ಹವಾನಿಯಂತ್ರಿತ ನೆಲಮಾಳಿಗೆ, ದೆಹಲಿ ಬಜಾರ್ ಮಾದರಿಯ ಶ್ರೀಕೃಷ್ಣ ದೇವರಾಯ ಪಾಲಿಕೆ ಬಜಾರ್ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 25 ರ ಭಾನುವಾರ ಸಂಜೆ 6 ಗಂಟೆಗೆ ಪಾಲಿಕೆ ಲೋಕಾರ್ಪಣೆಗೊಳ್ಳಲಿದೆ. ಹೀಗಾಗಿ ವಿಜಯನಗರ ರಸ್ತೆಯಲ್ಲಿ ಭಾನುವಾರ ಸಂಜೆ ವರೆಗೆ ಭಾಗಶಃ ಸಂಚಾರ ನಿರ್ಬಂಧ ಹೇರಲಾಗಿದೆ.
Updated on: Aug 24, 2024 | 5:13 PM

ಎಲ್ಲಿಂದ ಎಲ್ಲಿವರೆಗೆ ಸಂಚಾರ ನಿರ್ಬಂಧ?: ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾಗಶಃ ಸಂಚಾರ ನಿರ್ಬಂಧ ಹೇರಲಾಗಿದೆ. ವಿಜಯನಗರ ಬಸ್ ನಿಲ್ದಾಣ ಸಿಗ್ನಲ್ನಿಂದ ಮಾರೇನಹಳ್ಳಿ ಸಿಗ್ನಲ್ ವರೆಗೆ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ ಯಾವುದು?: ಸದ್ಯ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಕಡೆ ಬರುವ ವಾಹನಗಳನ್ನು ವಿಜಯನಗರ ಸರ್ವಿಸ್ ರಸ್ತೆ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಮಾಗಡಿ ರಸ್ತೆ ಕಡೆಯಿಂದ ಮೈಸೂರು ರಸ್ತೆ ಕಡೆ ತೆರಳುವ ವಾಹನಗಳನ್ನು ಮಾಮೂಲಿಯಂತೆ ಮುಖ್ಯ ರಸ್ತೆಯಲ್ಲೇ ಕಳುಹಿಸಲಾಗುತ್ತಿದೆ.

ಶನಿವಾರ ಮಧ್ಯಾಹ್ನದಿಂದ ರವಿವಾರ ಸಾಯಂಕಾಲದ ವರೆಗೆ ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲದೆ ಶನಿವಾರ ಆಗಮಿಸಿದ ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಾಯಿತು.

ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸದ್ಯ ಮೈಸೂರು ರಸ್ತೆ ಕಡೆ ತೆರಳುವ ಮಾರ್ಗದಲ್ಲಿ ದಟ್ಟಣೆ ಅಷ್ಟಾಗಿಲ್ಲ. ಸರ್ವಿಸ್ ರಸ್ತೆ ಮೂಲಕ ಬಸ್ ಹಾಗೂ ಇತರ ಘನ ವಾಹನಗಳೂ ಸಂಚರಿಸುತ್ತಿರುವುದರಿಂದ ದಟ್ಟಣೆ ಹೆಚ್ಚಾಗಿದೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ವಿಜಯನಗರ ಬಸ್ ನಿಲ್ದಾಣ ಸಿಗ್ನಲ್ನಿಂದ ಮಾರೇನಹಳ್ಳಿ ಸಿಗ್ನಲ್ ವರೆಗೆ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್ಗಳು ರಾರಾಜಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರ ಭಾವಚಿತ್ರಗಳಿರುವ ಬ್ಯಾನರ್ಗಳನ್ನು ಹಾಕಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಲಿಕೆ ಬಜಾರ್ ಲೋಕಾರ್ಪಣೆಗೊಳಿಸಲಿದ್ದಾರೆ. ಪಾಲಿಕೆ ಬಜಾರ್ ಬಳಿ ವಿಜಯನಗರ ಮುಖ್ಯ ರಸ್ತೆಯಲ್ಲೇ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ನೂತನ ಅಂಡರ್ ಗ್ರೌಂಡ್ ಪಾಲಿಕೆ ಬಜಾರ್ 100 ಮೀಟರ್ ಉದ್ದ, 11 ಮೀಟರ್ ಅಗಲ ಇದ್ದು, 3 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಹೊಂದಿದೆ.

ಪಾಲಿಕೆ ಬಜಾರ್ನ ಪಾದಚಾರಿ ಮಾರ್ಗದ ಎರಡೂ ಬದಿಗೆ 75ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಸ್ಲೈಡಿಂಗ್ ಡೋರ್‌ಗಳು, ಎಸ್ಕಲೇಟರ್‌ಗಳು ಮತ್ತು ಲಿಫ್ಟ್ ಸೌಲಭ್ಯವನ್ನು ಹೊಂದಿರುವ ಮಾರುಕಟ್ಟೆಗೆ ಎರಡು ಗೇಟ್‌ಗಳ ಮೂಲಕ ಸುಲಭವಾಗಿ ಪ್ರವೇಶಿಸಬಹುದಾಗಿದೆ.




