Deviramma Temple: ವರ್ಷಕ್ಕೊಮ್ಮೆ ದೀಪಾವಳಿಯಂದು ಮಾತ್ರ ದರುಶನ ನೀಡುವ ದೇವಿರಮ್ಮ ನೋಡಲು ಹರಿದುಬಂದ ಭಕ್ತ ಸಾಗರ
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮನ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಜನ ಬೆಟ್ಟ ಹತ್ತಿ ಬರುತ್ತಿದ್ದಾರೆ. ದುರ್ಗಮ ಹಾದಿಯಲ್ಲಿ ಬರಿಗಾಲಲ್ಲಿ ಭಕ್ತರು ಬೆಟ್ಟ ಏರುತ್ತಿದ್ದು ಈ ವೇಳೆ ಭಕ್ತರ ನೂಕುನುಗ್ಗಲು ಕೂಡ ಸಂಭವಿಸಿದೆ.
Updated on:Oct 24, 2022 | 8:15 AM

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮನ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಜನ ಬೆಟ್ಟ ಹತ್ತಿ ಬರುತ್ತಿದ್ದಾರೆ. ದುರ್ಗಮ ಹಾದಿಯಲ್ಲಿ ಬರಿಗಾಲಲ್ಲಿ ಭಕ್ತರು ಬೆಟ್ಟ ಏರುತ್ತಿದ್ದು ಈ ವೇಳೆ ಭಕ್ತರ ನೂಕುನುಗ್ಗಲು ಕೂಡ ಸಂಭವಿಸಿದೆ.

ವರ್ಷಕ್ಕೊಮ್ಮೆ ಅದರಲ್ಲೂ ದೀಪಾವಳಿಯಂದು ಮಾತ್ರ ದರುಶನ ನೀಡುವ ದೇವಿರಮ್ಮನನ್ನು ಕಣ್ತುಂಬಿಕೊಳ್ಳಲು ಭಕ್ತರು ರಾತ್ರಿಯಿಂದಲೇ ಬೆಟ್ಟವನ್ನೇರಲು ಆರಂಭಿಸುತ್ತಾರೆ. ಕಲ್ಲು ಮುಳ್ಳಿನ ಹಾದಿಯನ್ನೂ ಲೆಕ್ಕಿಸದೇ ಬೆಟ್ಟವನ್ನು ಏರುತ್ತಾರೆ.

ಕಾಫಿ ನಾಡು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟವನ್ನೇ ದೇವೀರಮ್ಮ ಬೆಟ್ಟ ಎನ್ನಲಾಗುತ್ತೆ. ಈ ದೇವಿಯನ್ನು ಬಿಂಡಿಗ ದೇವೀರಮ್ಮ ಎಂತಲೂ ಕರೆಯುತ್ತಾರೆ.

ಈ ಬೆಟ್ಟಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ. ತಾಯಿಯ ದರ್ಶನದ ಹಾದಿ ತುಂಬನೇ ಕಠಿಣ. ಇಲ್ಲಿಗೆ ಬಂದು ತಾಯಿ ದರ್ಶನ ಮಾಡಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತೆ ಎನ್ನಲಾಗುತ್ತೆ.

ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯನ್ನು ಹೊತ್ತು. ಈ ದಿನ ತಾಯಿಗೆ ಅರ್ಪಿಸುತ್ತಾರೆ. ಹರಕೆಯ ರೂಪದಲ್ಲಿ ತಾಯಿಗೆ ತುಪ್ಪ, ಬಳೆ, ಬಟ್ಟೆ, ಕಟ್ಟಿಗೆಗಳನ್ನು ಅರ್ಪಿಸಲಾಗುತ್ತೆ.

ಇಲ್ಲಿ ದೀಪಾವಳಿಯ ಎರಡನೇ ದಿನ ದೇವಾಲಯದ ಬಾಗಿಲು ತನ್ನಿಂದ ತಾನೆ ತೆರೆಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಂಡರೆ ಭಕ್ತರ ಆಸೆಗಳು ಈಡೇರುತ್ತವೆಯಂತೆ.

ಪೌರಾಣಿಕ ಹಿನ್ನಲೆಯ ಪ್ರಕಾರ ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದು ಉಗ್ರ ರೂಪ ತಾಳಿರುತ್ತಾಳೆ. ತನ್ನ ಕೋಪಕ್ಕೆ ಭಕ್ತರು ಸಿಲುಕಿಕೊಳ್ಳದಿರಲಿ ಎನ್ನುವ ಕಾರಣಕ್ಕೆ ಚಂದ್ರದ್ರೋಣ ಪರ್ವತದ ತಪ್ಪಲಿಗೆ ಬರುತ್ತಾಳೆ. ಈ ಪರ್ವತದಲ್ಲಿ ರುದ್ರಮುನಿ, ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ, ಗಾಳಲ್ಲಿ ಅಜ್ಜಯ್ಯ ಈ ಐದು ಜನ ತಪಸ್ವಿಗಳು ನೆಲೆಸಿರುತ್ತಾರೆ. ಅವರಲ್ಲಿ ತಾಯಿಯು ತನಗೆ ನೆಲೆಸಲು ಸ್ಥಳ ನೀಡುವಂತೆ ಕೋರುತ್ತಾಳೆ. ತಾವು ಐದು ಜನ ಪುರುಷರಾಗಿದ್ದರಿಂದ ತಮ್ಮಿಂದ ಅಣತಿ ದೂರದಲ್ಲಿ ನೆಲೆಸುವಂತೆ ಈ ಬೆಟ್ಟವನ್ನು ತೋರಿಸುತ್ತಾರೆ. ಅದರಂತೆಯೇ ತಾಯಿ ಆ ಬೆಟ್ಟದಲ್ಲಿ ಹೋಗಿ ನೆಲೆಸುತ್ತಾಳೆ ಎಂಬ ಕಥೆಯಿದೆ.
Published On - 8:15 am, Mon, 24 October 22




