
ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ರಾಯಲ್ ಅಸ್ಕಾಟ್ ಕುದುರೆ ರೇಸ್ ಕ್ರೀಡಾಕೂಟದಲ್ಲಿ ಸಾರಾ ಅಲಿ ಖಾನ್ ಮತ್ತು ಹೆನ್ರಿ ಕ್ಯಾವಿಲ್ ಭಾಗವಹಿಸಿದ್ದರು. ಈ ವೇಳೆ ಇಬ್ಬರೂ ಜೊತೆಯಾಗಿ ನಿಂತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಲೊಂಜೈನ್ಸ್ ಬ್ರ್ಯಾಂಡ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ ಹಾಗೂ ಸಾರಾ ಅಲಿ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ಶುರುವಾಯಿತು.

ವೈರಲ್ ಆಗಿರುವ ಫೋಟೋದಲ್ಲಿ ಇಬ್ಬರ ಉಡುಪುಗಳು ಪ್ರೇಕ್ಷಕರಲ್ಲಿ ದೊಡ್ಡ ಗೊಂದಲ ಮೂಡಿಸಿವೆ. ಸಾರಾ ಅಲಿ ಖಾನ್ ಬಿಳಿ ಬಣ್ಣದ ಫಾರ್ಮಲ್ ಸ್ಕರ್ಟ್ ಸೂಟ್ ಧರಿಸಿ, ತಲೆಗೆ ನೆಟ್ ಮಾದರಿಯ ಬಿಳಿ ಹ್ಯಾಟ್ ಧರಿಸಿದ್ದರೆ, ಹೆನ್ರಿ ಕ್ಯಾವಿಲ್ ಸೂಟ್ ಮತ್ತು ಹ್ಯಾಟ್ ಧರಿಸಿ ಕ್ಲಾಸಿಕ್ ಬ್ಲ್ಯಾಕ್ ಅಂಡ್ ವೈಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕ್ರಿಶ್ಚಿಯನ್ ಸಂಪ್ರದಾಯದ ವಧು-ವರರಂತೆ ಕಾಣಿಸುತ್ತಿರುವುದರಿಂದ, ಅನೇಕ ಅಭಿಮಾನಿಗಳು ಸಾರಾ ಅಲಿ ಖಾನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದೇ ತಪ್ಪಾಗಿ ಭಾವಿಸಿದರು.

ಆದರೆ, ನಿಜವಾಗಿಯೂ ಇದು ಯಾವುದೇ ಮದುವೆಯ ಫೋಟೋ ಅಲ್ಲ. ಬ್ರಿಟನ್‌ನ ಈ ರಾಯಲ್ ಅಸ್ಕಾಟ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಕಟ್ಟುನಿಟ್ಟಾದ ರಾಯಲ್ ಡ್ರೆಸ್ ಕೋಡ್ ಇರುತ್ತದೆ. ಅಲ್ಲಿಗೆ ಬರುವ ಪುರುಷರು ಮತ್ತು ಮಹಿಳೆಯರು ಇಂತಹ ಸಾಂಪ್ರದಾಯಿಕ ಹಾಗೂ ಫಾರ್ಮಲ್ ಉಡುಪುಗಳನ್ನೇ ಧರಿಸಬೇಕಾಗುತ್ತದೆ. ಈ ಕಾರ್ಯಕ್ರಮಕ್ಕೆ ಬ್ರಿಟನ್‌ನ ರಾಜ ಚಾರ್ಲ್ಸ್ III, ರಾಣಿ ಕೆಮಿಲ್ಲಾ ಮತ್ತು ರಾಜಕುಮಾರ ವಿಲಿಯಂ ಸೇರಿದಂತೆ ಇಡೀ ರಾಜಮನೆತನವೇ ಸಾಕ್ಷಿಯಾಗಿತ್ತು.

ಈ ಫೋಟೋದಲ್ಲಿ ಸಾರಾ ಪಕ್ಕದಲ್ಲಿ ನಿಂತಿರುವುದು ಹಾಲಿವುಡ್‌ನ ಪ್ರಸಿದ್ಧ 'ಸೂಪರ್‌ಮ್ಯಾನ್' ನಟ ಹೆನ್ರಿ ಕ್ಯಾವಿಲ್ ಎಂದು ತಿಳಿದ ತಕ್ಷಣ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ನೆಟ್ಟಿಗರು ಈ ಜೋಡಿಯನ್ನು 'ಪಟೌಡಿ ಪ್ರಿನ್ಸೆಸ್ ಮತ್ತು ಸೂಪರ್‌ಮ್ಯಾನ್' ಕಾಂಬಿನೇಷನ್ ಎಂದು ಕರೆದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

ಸದ್ಯ ಜಾಗತಿಕ ವೇದಿಕೆಯಲ್ಲಿ ಸದ್ದು ಮಾಡುತ್ತಿರುವ ಸಾರಾ ಅಲಿ ಖಾನ್ ಅವರು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ 'ಸ್ಕೈ ಫೋರ್ಸ್' ಮತ್ತು 'ಮೆಟ್ರೋ ಇನ್ ದಿನೋ' ಚಿತ್ರಗಳಲ್ಲಿ ನಟಿಸಿದ್ದ ಅವರು, ಇತ್ತೀಚೆಗೆ 'ಪತಿ ಪತ್ನಿ ಔರ್ ವೋ 2' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಪ್ರಸ್ತುತ ಆಯುಷ್ಮಾನ್ ಖುರಾನಾ ಜೊತೆಗೆ ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದ 'ಉಡ್ತಾ ತೀರ್' ಎಂಬ ಸ್ಪೈ ಕಾಮಿಡಿ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.