- Kannada News Photo gallery Dust Pollution from Highway Construction Devastates Koppal Farmers' Crops
ಕೊಪ್ಪಳ ಜಿಲ್ಲೆಯ ರೈತರಿಗೆ ಮುಳುವಾಯ್ತು ಕಾರ್ಖಾನೆ ಧೂಳು
ಕೊಪ್ಪಳ ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣದಿಂದ ಹೊರಬರುವ ಧೂಳು ರೈತರ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುತ್ತಿದೆ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ನಿಂಬೆಹಣ್ಣು ಮತ್ತು ದಾಳಿಂಬೆ ಬೆಳೆಗಳು ಹಾಳಾಗುತ್ತಿವೆ. ರೈತರು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಆದರೆ ಇನ್ನೂ ಯಾವುದೇ ಪರಿಹಾರ ದೊರೆತಿಲ್ಲ. ಧೂಳಿನಿಂದಾಗಿ ರೈತರ ಆರ್ಥಿಕ ಸ್ಥಿತಿ ಹದಗೆಟ್ಟಿದೆ.
Updated on: Feb 08, 2025 | 11:28 AM

ಧೂಳಿನಿಂದ ಕೊಪ್ಪಳ ಜಿಲ್ಲೆಯಲ್ಲಿ ಅನೇಕ ರೈತರ ಬದುಕು ಬೀದಿಗೆ ಬರುತ್ತಿದೆ. ಸದ್ಯ ಬೇಸಿಗೆಯ ಹೊಸ್ತಿಲಲ್ಲಿ ಇರುವುದಿರಿಂದ ನಿಂಬೆಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಒಂದು ನಿಂಬೆಹಣ್ಣು ಎರಡು ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ, ಕೊಪ್ಪಳ ಜಿಲ್ಲೆಯ ಹಲವಡೆ ರೈತರು ತಮ್ಮ ಕೃಷಿ ಜಮೀನಿನಲ್ಲಿ ಬೆಳೆದ ಸಾವಿರಾರು ನಿಂಬೆ ಹಣ್ಣುಗಳು ನೆಲದ ಮೇಲೆ ಬಿದ್ದು ಹಾಳಾಗಿ ಹೋಗುತ್ತಿವೆ. ಇದಕ್ಕೆ ಕಾರಣ, ಧೂಳು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದಲ್ಲಿ ಹತ್ತಾರು ರೈತರ ಬದುಕಿಗೆ ಧೂಳು ಕೊಳ್ಳೆ ಇಡುತ್ತಿದೆ. ಕಂದಕೂರು ಗ್ರಾಮದ ಸಮೀಪ ಅಂದ್ರೆ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ವ್ಯಾಪ್ತಿಯಲ್ಲಿ ಓರಿಯಂಟಲ್ ಸ್ಟ್ರಕ್ಚರಲ್ ಇಂಜನೀಯರಿಂಗ್ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿಯಿದೆ. ಈ ಕಂಪನಿ, ರಾಷ್ಟ್ರೀಯ ಹೆದ್ದಾರಿ ದುರಸ್ಥಿ ಗುತ್ತಿಗೆ ಪಡೆದಿದ್ದು, ಇಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ದುರಸ್ಥಿಗೆ ಬೇಕಾದ ಕಂಕರ್, ಡಾಂಬರ್, ಎಂ ಸ್ಯಾಂಡ್ ಅನ್ನು ಮಿಕ್ಸ್ ಮಾಡಿ ಕಳುಹಿಸಲಾಗುತ್ತದೆ. ಆದರೆ, ಇದೇ ಕಂಪನಿ ಹೊರಗೆ ಬಿಡುತ್ತಿರುವ ಧೂಳಿನಿಂದ ನಮ್ಮ ಬದುಕು ಮೂರಾಬಟ್ಟೆಯಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಂದಕೂರು ಸೇರಿದಂತೆ ಘಟಕದ ಸುತ್ತಮುತ್ತಲಿನ ಜಾಗದಲ್ಲಿ ಅನೇಕ ರೈತರು ತೋಟಗಾರಿಕೆ ಸೇರಿದಂತೆ ಅನೇಕ ಬೆಳೆಗಳನ್ನು ಬೆಳದಿದ್ದಾರೆ. ಆದರೆ, ಘಟಕದಿಂದ ನಿರಂತರವಾಗಿ ಹೊರ ಬತ್ತಿರುವ ಧೂಳು, ಬೆಳೆಗಳ ಮೇಲೆ ಬಂದು ಕೂರುತ್ತಿದೆ. ಇದರಿಂದ ಫಸಲು ಹಾಳಾಗುತ್ತಿದೆ ಅಂತ ರೈತರು ಆರೋಪ ಮಾಡಿದ್ದಾರೆ. ಹೆಚ್ಚಿನ ಧೂಳು ಇದ್ರೆ ನಿಂಬೆಹಣ್ಣು ಬೇಗನೆ ಹಾಳಾಗಿ ಹೋಗುತ್ತಿದೆ. ಹೀಗಾಗಿ, ಯಾರೂ ಖರೀದಿಸುತ್ತಿಲ್ಲ. ಹೀಗಾಗಿ ಲಕ್ಷ ಲಕ್ಷ ಆದಾಯದ ನಿಂಬೆಹಣ್ಣುಗಳು ತೋಟದಲ್ಲಿಯೇ ಹಾಳಾಗಿ ಹೋಗುತ್ತಿವೆ.

ಇನ್ನು ಅನೇಕ ರೈತರು ದಾಳಿಂಬೆ ಬೆಳದಿದ್ದಾರೆ. ಆದರೆ, ಧೂಳಿನಿಂದಾಗಿ ಹೂಬಿಟ್ಟರು ಕೂಡಾ ಕಾಯಿ ಆಗುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದಾಳಿಂಬೆ ಬೆಳೆದು ನಷ್ಟ ಅನುಭವಿಸುತ್ತಿದ್ದೇವೆ ಅಂತ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಅನೇಕ ರೈತರು ಬೆಳೆ ಬೆಳೆದು ಕೈಸುಟ್ಟುಕೊಂಡರೆ, ಇನ್ನು ಅನೇಕ ರೈತರು ಬೆಳೆ ಬೆಳೆಯೋದನ್ನು ಬಿಟ್ಟಿದ್ದಾರೆ. ಭೂಮಿಯಿದ್ರು ಕೂಡಾ ಪಾಳು ಬಿಡುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಈ ಘಟಕದಿಂದ ರೈತರಿಗೆ ತೊಂದರೆಯಾಗುತ್ತಿದೆಯಂತೆ. ಈ ಬಗ್ಗೆ ಘಟಕದವರಿಗೆ ಕೂಡಾ ರೈತರು ಧೂಳು ಬಾರದಂತೆ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಳ್ಳದೇ ಇದ್ದಾಗ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಧಿಕಾರಿ, ಸ್ಥಳೀಯ ಅಧಿಕಾರಿಗಳಿಗೆ ಕೂಡಾ ದೂರು ನೀಡಿದ್ದಾರಂತೆ. ಆದ್ರೆ ಯಾರೊಬ್ಬರು ಕೂಡಾ ಘಟಕದ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದರಿಂದ ಘಟಕದವರು ಬೇಕಾಬಿಟ್ಟಿಯಾಗಿ ಧೂಳು ಬಿಡ್ತಿದ್ದಾರೆ ಅಂತ ರೈತರು ಆರೋಪಿಸುತ್ತಿದ್ದಾರೆ.



