- Kannada News Photo gallery Former minister suresh kumar shares his experience about eco space in bengaluru
ಬೆಂಗಳೂರು ಸೆರಗಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಸಾಧಿಸಿದ ನಿಸರ್ಗ ಕೌಶಲ: 13 ಎಕರೆಯಲ್ಲಿ ಕಂಗೊಳಿಸುತ್ತಿದೆ ಸಸ್ಯ ವೈಭವ
ವಾರಕ್ಕೊಮ್ಮೆ ಇಲ್ಲಿ ದೊರಕುವ ಸೊಪ್ಪುಗಳು, ಗೆಡ್ಡೆ- ಗೆಣಸು, ರಾಜರಾಜೇಶ್ವರಿನಗರದಲ್ಲಿರುವ ಇವರ ಮನೆ ಸೊಗಡುನಲ್ಲಿ ಪ್ರತಿ ಗುರುವಾರ ಸೊಗಡು ಸಂತೆಯಲ್ಲಿ ದೊರಕುತ್ತವೆ. ಹಾಗೆಯೇ ಸೊಗಡು ರುಚಿಯನ್ನೂ ಆಸ್ವಾದಿಸಬಹುದು ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಲ್ಲಿ ಕಳೆದ ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ
Updated on: Jan 25, 2022 | 8:00 AM

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿನ್ನೆ (ಜನವರಿ 23)ಯ ಸೈಕಲ್ ಸವಾರಿಯ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶಿಷ್ಟ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶ ದೊರಕಿತ್ತು ಎಂದು ತಮ್ಮ ಸೈಕಲ್ ಸವಾರಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಶ್ರೀವತ್ಸ ಗೋವಿಂದರಾಜ್ ಸುಮಾರು 21 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಅದರಲ್ಲಿಯೂ ನಲವತ್ತು ದೇಶಗಳಲ್ಲಿ ಕೆಲಸ ಮಾಡಿದ ಹೆಮ್ಮೆ ಉಳ್ಳವರು. ತನಗೆ 40 ವರ್ಷಗಳಾದಾಗ ನಾನು ನನ್ನ ಪರಿಸರದ ಕಡೆಗೆ ವಾಪಸ್ ಬರಬೇಕು ಎಂದು ಮೊದಲೇ ಮಾಡಿದ ತೀರ್ಮಾನದಂತೆ ಮರಳಿ ಬಂದೇ ಬಿಟ್ಟರು ಶ್ರೀವತ್ಸ ಎಂದು ಸೈಕಲ್ ಸವಾರಿಯಲ್ಲಿ ಜತೆಯಾದ ಶ್ರೀವತ್ಸ ಅವರ ಪರಿಚಯ ಮಾಡಿದ್ದಾರೆ.

ಶ್ರೀವತ್ಸ ಮಾಗಡಿಯ ಬಳಿ ತಿಪ್ಪಗೊಂಡನಹಳ್ಳಿ ಜಲಾಶಯದ ಹತ್ತಿರ ಸುಮಾರು 13 ಎಕರೆ ವಿವಿಧ ಮರಗಳ, ಗಿಡಗಳ ನಡುವೆ ವಾಸಿಸುತ್ತಿದ್ದಾರೆ. ಅನೇಕ ರೀತಿಯ ಸೊಪ್ಪುಗಳು ಇವರ ಈ ಜಾಗದಲ್ಲಿ ಲಭ್ಯವಿದೆ. ಅನೇಕ ಪಕ್ಷಿಗಳ ಕಲರವ ಹೇರಳವಾಗಿ ದೊರಕುತ್ತದೆ. ಪ್ರಾಣಿಗಳ ದರ್ಶನ ಭಾಗ್ಯವೂ ಇಲ್ಲಿ ಆಗಬಹುದು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಮಾತನ್ನು ಮುಂದುವರಿಸಿದ್ದಾರೆ.

ಇಲ್ಲಿಗೆ ಹೋದವರಿಗೆ ಅದೇ ಸೊಪ್ಪುಗಳ ವಿವಿಧ ರೀತಿಯ ಭಕ್ಷ್ಯ- ಭೋಜನ ಸಿಕ್ಕೇ ಸಿಗುತ್ತದೆ. ನಿನ್ನೆ ನಮಗೂ ಸಹ ತುಳಸಿ ಎಲೆಗಳಿಂದ ಮಾಡಿದ ಪಲಾವ್ ಮತ್ತು ವಿವಿಧ ಹೂಗಳ ದಳಗಳಿಂದ ಮಾಡಿದ ರಾಯತದ ರುಚಿ ಭರ್ಜರಿಯಾಗಿ ಸಿಕ್ಕಿತ್ತು ಎಂದು ಸಚಿವರು ತಮ್ಮ ಅನುಭವದ ವಿವರಣೆ ನೀಡಿದ್ದಾರೆ.

ವಾರಕ್ಕೊಮ್ಮೆ ಇಲ್ಲಿ ದೊರಕುವ ಸೊಪ್ಪುಗಳು, ಗೆಡ್ಡೆ- ಗೆಣಸು, ರಾಜರಾಜೇಶ್ವರಿನಗರದಲ್ಲಿರುವ ಇವರ ಮನೆ ಸೊಗಡುನಲ್ಲಿ ಪ್ರತಿ ಗುರುವಾರ ಸೊಗಡು ಸಂತೆಯಲ್ಲಿ ದೊರಕುತ್ತವೆ. ಹಾಗೆಯೇ ಸೊಗಡು ರುಚಿಯನ್ನೂ ಆಸ್ವಾದಿಸಬಹುದು.

ಇವರ ಈ ಜಾಗದ ಹೆಸರು ಚಿಗುರು ಹೆಚ್ಚಿನ ಮಾಹಿತಿಗಾಗಿ 9845707043 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ಬೆಂಗಳೂರಿನಿಂದ ಸುಮಾರು 39 ಕಿಲೋಮೀಟರ್ ದೂರದಲ್ಲಿರುವ ಶ್ರೀವತ್ಸ ಗೋವಿಂದರಾಜ್ ರವರ "ಚಿಗುರು" ತಲುಪಿದಾಗ ನಮಗೆ ಸ್ವಾದಿಷ್ಟವಾದ ಬೇಲದ ಹಣ್ಣಿನ ರಸವೇ ಸ್ವಾಗತಿಸಿತು.

ಶ್ರೀವತ್ಸ ಅವರ ಉದ್ದೇಶ ಮಕ್ಕಳಿಗೆಲ್ಲ ನಮ್ಮ ನೆಲದ ಈ ಶ್ರೀಮಂತಿಕೆ ಪರಿಚಯ ವಾಗಬೇಕು. ನಮ್ಮ ಆಹಾರ ಪದ್ಧತಿ ಮತ್ತೊಮ್ಮೆ ಅವರೆಲ್ಲರ ಕುಟುಂಬಗಳ ಭಾಗವಾಗಿ ಎಲ್ಲರೂ ಆರೋಗ್ಯದಿಂದ ಇರಬೇಕು ಎಂಬುದು. ನಾವೆಲ್ಲ ಕೆಲವೇ ತರಕಾರಿಗಳಲ್ಲಿ ನಮ್ಮ ಜೀವನ ಸಾಗಿಸುತ್ತಿದ್ದೇವೆ ಎಂಬುವುದು ಅವರ ದೂರು.

ನಮ್ಮ ತಂಡವನ್ನೆಲ್ಲಾ ಇಡೀ ತಮ್ಮ ಜಾಗದಲ್ಲಿ ಓಡಾಡಿಸಿ ಪ್ರತಿಯೊಂದು ಗಿಡದ ಮಹತ್ವ, ಅದರಲ್ಲಿರುವ ಔಷಧಿ ಗುಣ, ಅದರಿಂದ ಮಾಡಬಹುದಾದ ಆಹಾರ ಪದಾರ್ಥ. ಇವುಗಳನ್ನೆಲ್ಲಾ ವಿವರಿಸುತ್ತಿದ್ದ ಶ್ರೀವತ್ಸ ರವರ ಕೌಶಲ್ಯತೆ ಎದ್ದು ಕಾಣುತ್ತಿತ್ತು.

ಒಟ್ಟಾರೆ ನಮ್ಮ ನಿನ್ನೆಯ ಸೈಕಲ್ ಸವಾರಿ ಇಂತಹ ವಿಶಿಷ್ಟ ವ್ಯಕ್ತಿ, ಅದ್ಭುತ ಜಾಗ ಪರಿಚಯಿಸಿತು. ನಮ್ಮ ಸೈಕಲ್ ತಂಡದ ಗೌರವಾನ್ವಿತ ಸದಸ್ಯರಾದ ಐದನೆಯ ತರಗತಿಯ ಯಶಸ್ ಗೌಡ, ಆರನೆಯ ತರಗತಿಯ ಮೊಕ್ಷಿತ್, ಒಂಬತ್ತನೆಯ ತರಗತಿಯ ದೀಪಕ್, ಹತ್ತನೆಯ ತರಗತಿಯ ಪರಿಣಿತ ಅವರಿಗೆ ನಿನ್ನೆ ಖುಷಿಯೋ ಖುಷಿ.

ಆಸಕ್ತ ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಬಂದು ನೋಡಲೇ ಬೇಕಾದ ಜಾಗವಿದು ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಲ್ಲಿ ಕಳೆದ ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.



















