
ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ಆರಂಭವಾಗಿದೆ. ಹಾಗಾಗಿ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿದೆ. ಸ್ವತಃ ಸಚಿವ ಜಮೀರ್ ಅಹ್ಮದ್ ಬೀಸುಕಲ್ಲಿನಲ್ಲಿ ಜೋಳ ಬೀಸಿ, ಒಣಕೆಯಿಂದ ಭತ್ತ ಕುಟ್ಟಿ ಸಂಭ್ರಮಿಸಿದ್ದಾರೆ.

ಇಂತಹದೊಂದು ಹೂ ಮತ್ತು ಸಿರಿಧಾನ್ಯ ಲೋಕ ಅರಳಿ ನಿಂತಿದ್ದು ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಲ್ಲಿ. ಇಂದಿನಿಂದ ಮೂರು ದಿನಗಳ ಕಾಲ ಹಂಪಿಯಲ್ಲಿ ಹಂಪಿ ಉತ್ಸವ ಆರಂಭವಾಗಿದೆ. ಉತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳವನ್ನು ಆಯೋಜಿಸಿದೆ.

ಹೂವುಗಳಲ್ಲಿ ಐತಿಹಾಸಿಕ ವಿರುಪಾಕ್ಷೇಶ್ವರ ದೇವಸ್ಥಾನ ಮತ್ತು ಬಸವಣ್ಣ ಮೂರ್ತಿ ಅರಳಿದೆ. ಇನ್ನೊಂದಡೆ ವಿಜಯನಗರ ಸಂಸ್ಥಾಪಕರಾದ ಹಕ್ಕಬುಕ್ಕರು, ವಿಜಯನಗರ ಲಾಂಛನ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳನ್ನು ಸಿರಿಧಾನ್ಯದಲ್ಲಿ ಮೂಡಿಸಲಾಗಿದೆ.

ಮೇಳಕ್ಕೆ ಇಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು. ಈ ಸಮಯದಲ್ಲಿ ವಿಜಯನಗರ ಜಿಲ್ಲೆಯ ಹಂಪಸಾಗರ ಗ್ರಾಮದ ಮಹಿಳೆಯರು ಬೀಸುಕಲ್ಲಿನಲ್ಲಿ ಜೋಳ ಬೀಸುವದನ್ನು ನೋಡಿದ ಸಚಿವ ಜಮೀರ್, ತಾವು ಕೂಡ ಜೋಳ ಬೀಸಿ ಸಂತಸ ಪಟ್ಟರು. ಜೊತೆಗೆ ಮಹಿಳೆಯರಿಗೆ ಐದು ಸಾವಿರ ರೂ ಹಣ ಕೂಡ ನೀಡಿದರು. ನಂತರ ಒಣಕೆ ಹಿಡಿದು ಭತ್ತ ಕುಟ್ಟಿ ನಮ್ಮ ಹಿಂದಿನ ಪರಂಪರೆಯನ್ನು ನೆನಪಿಸುವ ಕೆಲಸ ಮಾಡಿರುವ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಈ ಬಾರಿ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಸರಿಸುಮಾರು ಐದು ಕ್ವಿಂಟಲ್‌ಗೂ ಅನೇಕ ಹೂಗಳನ್ನು ಬಳಸಿ ವಿರೂಪಾಕ್ಷ ದೇವಲಯ, ಬಸವಣ್ಣ ಮೂರ್ತಿಗಳನ್ನು ನಿರ್ಮಾಣ ಮಾಡಲಾಗಿದೆ. ಸಿರಿಧಾನ್ಯಗಳಲ್ಲಿ ಹಕ್ಕಬುಕ್ಕರು, ವಿಜಯನಗರ ಲಾಂಛನ ತಯಾರಿಸಲಾಗಿದೆ.

ಹೀಗಾಗಿ ಉತ್ಸವಕ್ಕೆ ಬರುತ್ತಿರುವ ಹೆಚ್ಚಿನ ಜನರು ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳವನ್ನು ನೋಡಿ ಸಂತಸ ಪಡುತ್ತಿದ್ದಾರೆ.
Published On - 4:34 pm, Fri, 28 February 25