
ಬಹುಭಾಷಾ ನಟಿ ಪಾರ್ವತಿ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೇರಳ ಮೂಲದ ನಟಿ ಮಲಯಾಳಂ ಸೇರಿದಂತೆ ಕನ್ನಡ, ತಮಿಳು, ಹಿಂದಿ ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ.

ಹಲವು ಭಾಷೆಗಳಲ್ಲಿ ಸೂಪರ್ಹಿಟ್ ಚಿತ್ರ ನೀಡಿರುವ ಪಾರ್ವತಿ ಪ್ರಸ್ತುತ ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಾರ್ವತಿ ಕನ್ನಡದಲ್ಲಿ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಎರಡು ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದ ಚಿತ್ರಗಳು. ಮತ್ತೆರಡು ಚಿತ್ರಗಳಿಗೆ ಜನರಿಂದ ವ್ಯಾಪಕ ಪ್ರಶಂಸೆ ಲಭ್ಯವಾಗಿತ್ತು.

ಪುನೀತ್ ರಾಜ್ಕುಮಾರ್ ನಟನೆಯ ‘ಮಿಲನ’ ಚಿತ್ರದ ಮೂಲಕ ಪಾರ್ವತಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. 2007ರಲ್ಲಿ ತೆರೆಕಂಡ ಈ ಚಿತ್ರ ಕೌಟುಂಬಿಕ ಚಿತ್ರವಾಗಿ ಜನಮನ ಸೂರೆಗೊಂಡಿತ್ತು.

2009ರಲ್ಲಿ ಪಾರ್ವತಿ ‘ಮಳೆ ಬರಲಿ, ಮಂಜೂ ಇರಲಿ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜತೆ ಕಾಣಿಸಿಕೊಂಡರು. ಜನರ ಗಮನಸೆಳೆಯಲು ಚಿತ್ರ ಯಶಸ್ವಿಯಾಯಿತು.

ಪಾರ್ವತಿ- ಪುನೀತ್ ಹಿಟ್ ಜೋಡಿ ‘ಪೃಥ್ವಿ’ ಚಿತ್ರದ ಮೂಲಕ ಮತ್ತೆ ಒಂದಾಯಿತು. ಈ ಚಿತ್ರ ಕೂಡ ಸೂಪರ್ ಹಿಟ್ ಆಗಿದ್ದಲ್ಲದೇ ಪಾರ್ವತಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

2013ರಲ್ಲಿ ‘ಅಂದರ್ ಬಾಹರ್’ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಶಿವರಾಜ್ಕುಮಾರ್ ಜತೆ ತೆರೆಹಂಚಿಕೊಂಡಿದ್ದರು. ಈ ಚಿತ್ರವೂ ಜನರ ಮೆಚ್ಚುಗೆ ಗಳಿಸಿತು. ಈ ಚಿತ್ರದ ನಂತರ ಪಾರ್ವತಿ ಮತ್ಯಾವ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.