
ಹಾಸನ ಜಿಲ್ಲೆಯ ಆಲೂರು, ಬೇಲೂರು ಸಕಲೇಶಫುರ ಭಾಗದಲ್ಲಿ ಕಾಡಾನೆ ಹಾವಳಿಯಿಂದ ನಾಲ್ಕು ತಿಂಗಳಲ್ಲಿ ಐವರು ಅಮಾಯಕರು ಬಲಿಯಾಗಿದ್ದಾರೆ. ಜನವರಿಯಿಂದ ಏಪ್ರಿಲ್ವರೆಗೆ ಇಬ್ಬರು ಮಹಿಳೆಯರು ಸೇರಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಾಫಿ ತೋಟದ ಕಾರ್ಮಿಕರು ಮತ್ತು ಮಾಲೀಕರು ಕಾಡಾನೆ ದಾಳಿಗೆ ಸರಣಿಯಾಗಿ ಬಲಿಯಾಗುತ್ತಿದ್ದು ಈ ಭಾಗದಲ್ಲಿ ಉಪಟಳ ನೀಡುತ್ತಿರುವ ಎಲ್ಲ ಆನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂಬ ಒತ್ತಾಯಕ್ಕೆ ಮಣಿದ ಸರ್ಕಾರ ಮಾರ್ಚ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ ಮೂರು ಆನೆ ಸೆರೆ ಹಿಡಿದು ಸ್ಥಳಾಂತರ ಮಾಡಿತ್ತು. ಏಪ್ರಿಲ್ 25ರಂದು ಸಕಲೇಶಫುರ ತಾಲೂಕಿನ ಬೈಕೆರೆ ಬಳಿ ಕಾಫಿ ಬೆಳೆಗಾರ ಷಣ್ಮುಖ ಎಂಬುವವರನ್ನು ಮತ್ತೊಂದು ಆನೆ ಹತ್ಯೆಗೈದ ಬಳಿಕ ಜನರು ತೀವ್ರವಾಗಿ ಹೋರಾಟ ನಡೆಸಿದರು. ಕೂಡಲೆ ಎಲ್ಲ ಆನೆಗಳನ್ನು ಸೆರೆ ಹಿಡಿಯಿರಿ ಎಂದು ಆಗ್ರಹಿಸಿದ್ದರು.

ಅದರಂತೆ ಇಂದಿನಿಂದ ಕರ್ನಾಟಕ ಭೀಮ ನೇತೃತ್ವದಲ್ಲಿ ಸುಗ್ರಿವ, ಅಭಿಮನ್ಯು, ಧನಂಜಯ ಸೇರಿ ಐದು ಸಾಕಾನೆಗಳ ನೇತೃತ್ವದಲ್ಲಿ ಪುಂಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಮೊದಲ ದಿನವೇ ಸಕಲೇಶಫುರ ತಾಲೂಕಿನ ಹಲಸುಲಿಗೆ ಬಳಿಕ ಮಾಗಡಿ ಎಸ್ಟೇಟ್ನಲ್ಲಿ ಅಡಗಿದ್ದ ಅಂದಾಜು 21 ವರ್ಷದ ಒಂಟಿ ಸಲಗವನ್ನು ಸೆರೆಹಿಡಿಯಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರದಿಂದಲೇ ಜನರಿಗೆ ಉಪಟಳ ನೀಡುತ್ತಿರುವ ಸಲಗವನ್ನು ಹಿಂಬಾಲಿಸಿ ಟ್ರ್ಯಾಕ್ ಮಾಡಿದ್ದರು. ಗುರುವಾರ ಬೆಳೆಗ್ಗೆ ಕಾರ್ಯಾಚರಣೆ ನಡೆಸಿದ ಸಿಸಿಎಫ್ ಏಡುಕೊಂಡಲು ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದ ಅರಣ್ಯ ಇಲಾಖೆಯ ಟೀಂ ಮದ್ಯಾಹ್ನದ ವೇಳೆಗೆ ಆನೆಗೆ ಅರವಳಿಗೆ ಮದ್ದು ನೀಡಿ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಮತ್ತೆ ಹೆಚ್ಚಾಗಿದ್ದು ಮತ್ತೆ ಆನೆ ಸೆರೆ ಕಾರ್ಯಾಚರಣೆ ಆರಂಭ ಮಾಡಲಾಗಿದೆ. ನಾಳೆ ಸಚಿವರು ಜಿಲ್ಲೆಗೆ ಬರುತ್ತಿದ್ದು ಬೆಳೆಗಾರರು ಹಾಗೂ ಅದಿಕಾರಿಗಳ ಸಭೆ ನಡೆಸಿ ಶಾಶ್ವತ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಾಫಿತೋಟದಲ್ಲೇ ಬೀಡು ಬಿಟ್ಟಿರುವ 80ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ತೋಟದಿಂದ ತೋಟಕ್ಕೆ ಅಲೆಯುತ್ತಾ ಬೆಳೆ ಹಾನಿ ಜೊತೆಗೆ ಜನರ ಜೀವ ತೆಗೆಯುತ್ತಿವೆ. ಕಾಫಿತೋಟದಲ್ಲಿ ನಿತ್ಯ ಕೆಲಸ ಮಾಡಬೇಕಾದ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದು ದಿನ ದೂಡಬೇಕಾಗಿದೆ. ಕಾಫಿ ತೋಟಕ್ಕೆ ಹೋಗುವ ಹಾಗಿಲ್ಲ, ಹೋಗದೆ ಇರುವ ಹಾಗಿಲ್ಲ ಎಂಬ ವಿಚಿತ್ರ ಸನ್ನಿವೇಶದಲ್ಲಿ ಮಲೆನಾಡಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆರ್ಆರ್ಟಿ, ಇಟಿಎಫ್ ಅಂತ ಟೀಂ ಮಾಡಿಕೊಂಡು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿ, ಎಲ್ಲೆಡೆ ಸೋಲಾರ್ ಬೇಲಿ, ಆನೆ ಕಂದಕ, ರೈಲ್ವೆ ಬ್ಯಾರಿಕೇಡ್ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ಅನೆಗಳ ಬೆನ್ನ ಹಿಂದಿದ್ದರೂ ಜನರ ಬಲಿ ತಡೆಯಲು ಆಗುತ್ತಿಲ್ಲ. ಎಲ್ಲ ಆನೆಗಳನ್ನು ಸ್ಥಳಾಂತರ ಮಾಡಲು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಆನೆಗಳ ಸಾಫ್ಟ್ ರಿಲೀಸ್ ಸೆಂಟರ್ ಮಾಡುವ ಘೋಷಣೆ ಮಾಡಿದ್ದರೂ ಅದು ಶೀಘ್ರವಾಗಿ ಕಾರ್ಯರೂಪಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ.

ಒಟ್ಟಿನಲ್ಲಿ ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನೆಮ್ಮದಿ ಕೆಡಿಸಿರುವ ಆನೆಗಳ ಹಾವಳಿಗೆ ಬ್ರೇಕ್ ಹಾಕಬೇಕು. ಸರಣಿಯಾಗಿ ಜನರ ಜೀವ ತೆಗೆಯುತ್ತಿರುವ ಸಲಗಗಳ ಸಮಸ್ಯೆಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಜನರು ಕೇಳುತ್ತಿದ್ದಾರೆ.